Site icon TUNGATARANGA

ಯಾವ ಕ್ಷಣದಲ್ಲಾದರೂ ಭದ್ರೆಯಿಂದ ನೀರು, ಆಸುಪಾಸಿನವರು ಎಚ್ಚರದಿಂದಿರಿ…!

ಜಲಾಶಯ ಮಟ್ಟ ಹೆಚ್ಚಳ : ನದಿ ಪಾತ್ರದ ಜನರಿಗೆ ಎಚ್ಚರಿಕೆ

ಶಿವಮೊಗ್ಗ ಜುಲೈ 12:
ಸತತ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಂಭವ ಇರುವುದರಿಂದ ಜನ, ಜಾನುವಾರು ನದಿಪಾತ್ರದಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ.

ಜು.12 ರಂದು ಜಲಾಶಯದ ನೀರಿನ ಮಟ್ಟ 178’ 10” ಅಡಿಗಿಂತ ಹೆಚ್ಚಾಗಿರುತ್ತದೆ. ಪ್ರಸ್ತುತ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ 30200 ಕ್ಯೂಸೆಕ್ಸ್ ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು ಇದೇ ರೀತಿ ಮುಂದುವರೆದಲ್ಲಿ ಭದ್ರಾ ಜಲಾಶಯವು ಗರಿಷ್ಟ ನೀರಿನ ಮಟ್ಟ 186 ಅಡಿಗಳಿಗೆ ಅತೀ ಶೀಘ್ರವಾಗಿ ಭರ್ತಿಯಾಗುವ ಸಂಭವವಿರುತ್ತದೆ.
ಅಣೆಕಟ್ಟು ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಕ್ರೆಸ್ಟ್ ಗೇಟ್ ಮುಖಾಂತರ ನದಿಗೆ ಬಿಡಲಾಗುವುದು.

ಆದ್ದರಿಂದ ಭದ್ರಾ ನದಿಯ ಎಡ ಮತ್ತು ಬಲದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಅಭಿಯಂತರರಾದ ಜಿ.ಎಸ್.ಪಟೇಲ್ ತಿಳಿಸಿದ್ದಾರೆ.

Exit mobile version