Site icon TUNGATARANGA

shimoga/ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ !..

ಶಿವಮೊಗ್ಗ,
ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.


ಕೇಂದ್ರದ ಜನ ವಿರೋಧಿ ಭ್ರಷ್ಟ ಬಿಜೆಪಿ ಸರ್ಕಾರ ಪದೇಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ದೇಶದ ಜನರಿಗೆ ಬರೆ ಮೇಲೆ ಬರೆ ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಾದ ಸರ್ಕಾರ ಕಣ್ಮುಚ್ಚಿ ಕೂತು ಈಗಾಗಲೇ ಒಂದೇ ವರ್ಷಕ್ಕೆ ೮ ಬಾರಿ ಅಡುಗೆ ಸಿಲಿಂಡರ್ ದರವನ್ನು ಏರಿಕೆ ಮಾಡಿದ್ದು ಶ್ರೀಸಾಮಾನ್ಯ ನನ್ನು ಕಿತ್ತು ತಿನ್ನುತ್ತಿರುವುದು ಜನವಿರೋಧಿತನವನ್ನು ತೋರಿಸುತ್ತದೆ ಎಂದು ದೂರಿದರು.


ಅಡುಗೆ ಅನಿಲದ ಬೆಲೆ ಈಗಾಗಲೇ ಸಾವಿರ ರೂ. ಗಡಿ ದಾಟಿದ್ದು, ಮತ್ತೆ ಕೇಂದ್ರ ಸರ್ಕಾರ ಬೆಲೆಯನ್ನು ಮತ್ತೆ ೫೦ ರೂ. ಏರಿಕೆ ಮಾಡಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದ್ದು, ಜನಸಾಮಾನ್ಯರು ಸಂಕಷ್ಟಪಡುವ ಪರಿಸ್ಥಿತಿಯಲ್ಲಿರುವಾಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವು ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಆರ್ಥಿಕ ವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.


೪೦% ಕಮಿಷನ್ ಲೂಟಿ ಹೊಡೆಯುತ್ತಾ ಸರ್ಕಾರಿ ಸೌಮ್ಯದ ಸಂಸ್ಥೆಗಳನೆಲ್ಲ ಖಾಸಗಿಕರಣ ಮಾಡುತ್ತಾ, ರೈತರಿಗೆ, ಯುವಕರಿಗೆ, ಜನಸಾಮಾನ್ಯರಿಗೆ ಜನವಿರೋಧಿ ಆಡಳಿತ ನಡೆಯುತ್ತಿರುವ ಭ್ರಷ್ಟ ದಿವಾಳಿತನದ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಕೂಡಲೇ ರಾಷ್ಟ್ರಪತಿಗಳು ವಜಾ ಮಾಡಬೇಕೆಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಸುವರ್ಣಾ ನಾಗರಾಜ್, ಬಿ. ಲೋಕೇಶ್, ಎಸ್. ಕುಮಾರೇಶ್, ಈ.ಟಿ. ನಿತಿನ್, ಅಫ್ತಾಬ್ ಅಹಮದ್, ಸಚಿನ್ ಸಿಂಧ್ಯಾ, ಶಿಲ್ಪಾ ಈಶ್ವರ್, ಎಂ. ರಾಹುಲ್, ಇರ್ಫಾನ್, ಪುಷ್ಪಕ್ ಕುಮಾರ್, ಎಂ. ರಾಕೇಶ್, ಇಮ್ರಾನ್ ಸಮೀರ್ ಖಾನ್, ಜಮೀಲ್, ಮೋಹನ್ ಸೋಮಿನಕೊಪ್ಪ, ಸುಹಾಸ್ ಗೌಡ, ತಬ್ರೇಸ್ ಭದ್ರಾವತಿ, ಶಶಿ ಮೈದೊಳ್, ನದೀಮ್, ಉಲ್ಲಾಸ್, ಸುಭಾನ್, ಮಸ್ತಾನ್ ಮತ್ತಿತರರಿದ್ದರು.

Exit mobile version