Site icon TUNGATARANGA

ಶಿವಮೊಗ್ಗ |ಖಾಸಗಿ ಆಸ್ಪತ್ರೆಯಲ್ಲಿ ಗೃಹಿಣಿಗೆ ಅವಧಿ ಮೀರಿದ ಚುಚ್ಚು ಮದ್ದು ಆರೋಪ! | ಗೃಹಿಣಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು


ಭದ್ರಾವತಿ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೊಟ್ಟೆ ನೋವು ಎಂದು ಚಿಕಿತ್ಸೆಗೆ ದಾಖಲಾದ ಮಹಿಳೆಗೆ ಅವಧಿ ಮುಕ್ತಾಯಗೊಂಡಿರುವ ಹಾಗು ಕಾಯಿಲೆಗೆ ಸಂಬಂಧವಿಲ್ಲದ ಚುಚ್ಚು ಮದ್ದು ನೀಡುವ ಮೂಲಕ ನಿರ್ಲಕ್ಷ್ಯತನ ವಹಿಸಲಾಗಿದ್ದು, ಈ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ತಾಲೂಕು ಅಧ್ಯಕ್ಷ ಜೋಯಲ್ ಥಾಮ್ಸನ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳಿಗೆ ಹಾಗು ತಾಲೂಕು ಆರೋಗ್ಯಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ಸಿರಿಯೂರು ಶಿವರಾಮನಗರದ ನಿವಾಸಿ 22 ವರ್ಷದ ಶ್ವೇತ ಎಂಬ ಗೃಹಿಣಿ ಹೊಟ್ಟೆ ನೋವಿನಿಂದ ಬಳುತ್ತಿದ್ದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಜು.6ರಂದು ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ಶ್ವೇತ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಇವರ ಪತಿ ಎಂ. ವಿನೋದ್ ಹಾಗು ಕುಟುಂಬಸ್ಥರು, ಬೆಂಬಲಿಗರು ಅವಧಿ ಮುಕ್ತಾಯಗೊಂಡಿರುವ ಚುಚ್ಚು ಮದ್ದು ನೀಡಿರುವ ಹಿನ್ನಲೆಯಲ್ಲಿ ಅಸ್ವಸ್ಥಗೊಂಡಿದ್ದಾರೆಂದು ಆರೋಪಿಸಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಆಸ್ಪತ್ರೆಗೆ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ಪೊಲೀಸರು ಭೇಟಿ ನೀಡಿ ಕುಟುಂಬಸ್ಥರು ಹಾಗು ಬೆಂಬಲಿಗರ ಮತ್ತು ಆಸ್ಪತ್ರೆಯವರ ವಾದ ಆಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಚುಚ್ಚು ಮದ್ದು ಎಲ್ಲಿಂದ ಬಂತು ಗೊತ್ತಿಲ್ಲ?
ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಥಳದಲ್ಲಿ ಪತ್ತೆಯಾಗಿರುವ ಅವಧಿ ಮುಕ್ತಾಯಗೊಂಡಿರುವ ಚುಚ್ಚು ಮದ್ದು ಎಲ್ಲಿಂದ ಬಂತು ಎಂದು ಯಾರಿಗೂ ತಿಳಿದಿಲ್ಲ. ರೋಗಿಗೆ ಈ ಚುಚ್ಚು ಮದ್ದು ನೀಡಲು ಶಿಪಾರಸ್ಸು ಮಾಡಿಲ್ಲ. ಈ ಚುಚ್ಚುಮದ್ದು ಕುರಿತ ಮಾಹಿತಿ ದಿನಪಟ್ಟಿಯಲ್ಲೂ ಹಾಗು ವೈದ್ಯರ ತಪಸಣಾ ಚೀಟಿಯಲ್ಲೂ ದಾಖಲಾಗಿಲ್ಲ ಎಂಬುದು ಆಸ್ಪತ್ರೆಯ ವಾದವಾಗಿದೆ. ಈ ನಡುವೆ ಕುಟುಂಬಸ್ಥರು ಹಾಗು ಬೆಂಬಲಿಗರು ಈ ಔಷಧಿ ಇಲ್ಲಿಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ. ಇದರಿಂದಾಗಿ ಸೂಕ್ತ ತನಿಖೆ ನಡೆಸುವುದು ಅನಿವಾರ್ಯವಾಗಿದೆ.

ಮೆಗ್ಗಾನ್ ಆಸ್ಪತ್ರೆ ದಾಖಲು :
ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯತನ ತೋರಿರುವ ಖಾಸಗಿ ಅಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಹಾಗು ಬೆಂಬಲಿಗರು ಗೃಹಿಣಿ ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಆತಂಕಗೊಂಡು ಗುರುವಾರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಖಾಸಗಿ ಆಸ್ಪತ್ರೆಯವರು ಕಾಯಿಲೆ ಸಂಪೂರ್ಣವಾಗಿ ಗುಣಪಡಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕುಟುಂಬಸ್ಥರು ಹಾಗು ಬೆಂಬಲಿಗರು ಖಾಸಗಿ ಆಸ್ಪತ್ರೆಯವರ ಮೇಲೆ ನಂಬಿಕೆ ಹೊಂದಿಲ್ಲ ಎನ್ನಲಾಗಿದೆ.
ಇದೀಗ ಪ್ರಕರಣಕ್ಕೆ ಸಂಬಂದಿಸಿದಂತೆ ಜೋಯಲ್ ಥಾಮ್ಸನ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳಿಗೆ ಹಾಗು ತಾಲೂಕು ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ನಿರ್ಲಕ್ಷ್ಯ ವಹಿಸಿರುವ ಖಾಸಗಿ ಆಸ್ಪತ್ರೆ ವಿರುದ್ಧ ಹಾಗು ಔಷಧಿ ತಯಾರಿಕ ಕಂಪನಿ ಮತ್ತು ಔಷಧಿ ಸರಬರಾಜು ಪ್ರತಿನಿಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Exit mobile version