Site icon TUNGATARANGA

ಮುಸ್ಲಿಮರು ಭಾಗಿಯಾಗಿರುವ ಹತ್ಯೆ ಪ್ರಕರಣಗಳು ಮಾತ್ರ ಗಂಭೀರವೇ:ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ!…

ಸಾಗರ, ಜು.೦೮:
ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಮುಸ್ಲಿಮರು ಭಾಗಿಯಾಗಿರುವ ಹತ್ಯೆ ಪ್ರಕರಣಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸುವಂತೆ ಕಾಣುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರ ವಾಗಿ ಪರಿಗಣಿಸದೇ ಇರುವುದು ಈ ಮಾತಿಗೆ ಸಾಕ್ಷಿಯಾಗಿದೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.


’ರಾಜಸ್ಥಾನದ ಉದಯಪುರದಲ್ಲಿ ನಡೆದ ಕೊಲೆ ಪ್ರಕರಣದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣದಲ್ಲಿ ಮಾತ್ರ ಮೌನ ವಹಿಸಿದ್ದಾರೆ. ಈ ಪ್ರಕರಣದ ಆರೋಪಿಗಳು ಒಂದು ವೇಳೆ ಮುಸ್ಲಿಮರಾಗಿದ್ದರೆ ಇಷ್ಟೊತ್ತಿಗೆ ಬಿಜೆಪಿ ಮುಖಂಡರು ಬೊಬ್ಬೆ ಹೊಡೆಯು ತ್ತಿದ್ದರು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.


ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ರಾಜಕೀಯ ಲಾಭ ಪಡೆಯಲು ಬಿಜೆಪಿ ಮುಂದಾಗಿತ್ತು. ಈಗ ಆ ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ದೊರಕುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ. ಆಡಳಿತ ಸತ್ತು ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ ಎಂದರು.


ಕೊಲೆಗೆ ಕೊಲೆಯ ಮೂಲಕವೇ ಉತ್ತರ ಕೊಡಬೇಕು ಎಂದು ಬಿಜೆಪಿ ಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆ ಪ್ರಚೋನಕಾರಿಯಾದ ಮಾತು ಆಗಿದೆ. ಬೆಜೆಪಿಯ ಮುಖಂಡರಿಗೆ ಇಂತಹ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡುವುದು ಅಭ್ಯಾಸವಾಗಿಬಿಟ್ಟಿದೆ. ಆ ಪಕ್ಷದ ನಾಯಕಿ ನೂಪುರ್ ಶರ್ಮ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದರೂ ಬಿಜೆಪಿಯವರಿಗೆ ಬುದ್ದಿ ಬಂದಿಲ್ಲ ಎಂದರು. ಐ.ಎನ್.ಸುರೇಶ್ ಬಾಬು ಇತರರಿದ್ದರು.

Exit mobile version