Site icon TUNGATARANGA

shimoga/ದೀಪ ಆರುವಾಗ ಜೋರಾಗಿ ಉರಿಯುವಂತೆ ಕಾಂಗ್ರೆಸ್ ಮುಖಂಡರು ಉರಿಯುತ್ತಿದ್ದಾರೆ : ಮಾಜಿ ಉಪಮುಖ್ಯಮಂತ್ರಿ, ಕೆ.ಎಸ್. ಈಶ್ವರಪ್ಪ ಲೇವಡಿ!….

ಶಿವಮೊಗ್ಗ, ಜು.೦೬:
ಕಾಂಗ್ರೆಸ್ ನಾಯಕರಿಗೆ ದುಸ್ಥಿತಿ ಬಂದಿದ್ದು, ದೀಪ ಆರುವಾಗ ಜೋರಾಗಿ ಉರಿಯುವಂತೆ ಕಾಂಗ್ರೆಸ್ ಮುಖಂಡರು ಉರಿಯುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.


ಅವರು ಇಂದು ತುಂಬಿದ ತುಂಗಾ ನದಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು.


ಕಾಂಗ್ರೆಸ್ ಪಕ್ಷದಲ್ಲಿಯೇ ಒಗ್ಗಟ್ಟಿಲ್ಲ. ಅದು ಛಿದ್ರ ಛಿದ್ರವಾಗುತ್ತಿದೆ. ಮನೆಯ ದೊಡ್ಡಣ್ಣನ (ಪಕ್ಷದ ಹಿರಿಯ ನಾಯಕ ಸಿದ್ಧರಾಮಯ್ಯ) ಜನ್ಮದಿನೋತ್ಸವ ಸಿದ್ಧರಾಮೋತ್ಸವಕ್ಕೆ ಅವರ ಅಣ್ಣತಮ್ಮಂದಿರೇ(ಪಕ್ಷದ ಮುಖಂಡರು) ವಿರೋಧಿಸುತ್ತಿದ್ದಾರೆ. ಸಿದ್ಧರಾಮೋತ್ಸವಕ್ಕೂ ನಮಗೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇಂತಹ ದುಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು

.
ಆಡಳಿತದ ವಿರೋಧಿ ಅಲೆ ಇದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನವರಿಗೆ ಅರ್ಥವಾಗಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಮಾಡಿದ್ದರು. ಬಿಜೆಪಿ ಒಂದು ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ ಎಂದಿದ್ದರು. ಆಗ ಬಿಜೆಪಿ ೨೮ ಲೋಕಸಭೆ ಕ್ಷೇತ್ರಗಳಲ್ಲಿ ೨೫ ಸ್ಥಾನಗಳನ್ನು ಗೆದ್ದಿತ್ತು. ಇದು ಕಾಂಗ್ರೆಸ್ ನವರಿಗೆ ತಿಳಿಯಲಿ ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಜಯಲಕ್ಷ್ಮಿ ಈಶ್ವರಪ್ಪ, ಕೆ.ಇ. ಕಾಂತೇಶ್, ಸಂತೋಷ್ ಬಳ್ಳೆಕೆರೆ, ಇ. ವಿಶ್ವಾಸ್, ಉಪಮೇಯರ್ ಶಂಕರ್ ಗನ್ನಿ ಮೊದಲಾದವರಿದ್ದರು.

ತುಂಗೆಗೆ ಬಾಗಿನ ಅರ್ಪಿಸಿದ ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಕಡೆ ಮಳೆಯಾಗುತ್ತಿದೆ. ರೈತರಿಗೆ ಸಂತೋಷವಾಗಿದೆ, ಪ್ರತಿಬಾರಿಯೂ ತುಂಗಾ ನದಿ ತುಂಬಿದಾಗ ಬಿಜೆಪಿ ಕಾರ್ಯಕರ್ತರು ಬಾಗಿನ ಅರ್ಪಿಸುವುದು ವಾಡಿಕೆ. ಆ ಮೂಲಕ ತುಂಗಾ ಮಾತೆಗೆ ನಮಿಸಿ ಈ ನಾಡಿನ ಜನ ನೆಮ್ಮದಿಯಿಂದ ಇರುವಂತೆ ಪ್ರಾರ್ಥಿಸಲಾಗಿದೆ ಎಂದರು.
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಆಕಸ್ಮಾತ್ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ
.

Exit mobile version