Site icon TUNGATARANGA

shimoga/ಭ್ರಷ್ಟಾಚಾರ ಯಾವ ರೂಪದಲ್ಲೇ ಇದ್ದರೂ ಅದು ಅಪರಾಧ: ನ್ಯಾ ಮುಸ್ತಫಾ ಹುಸೇನ್.ಎಸ್.ಎ !…

ಶಿವಮೊಗ್ಗ, ಜು.೦೬:
ಭ್ರಷ್ಟಾಚಾರ ಯಾವ ರೂಪದಲ್ಲೇ ಇದ್ದರೂ ಅದು ಅಪರಾಧ. ಆದ್ದರಿಂದ ಸರ್ಕಾರಿ ಸೇವಕರು ಮತ್ತು ಸಾರ್ವಜನಿಕರು ಇಬ್ಬರೂ ಲೋಕಾಯುಕ್ತ ಕಾಯ್ದೆ ಬಗ್ಗೆ ತಿಳಿದುಕೊಂಡು, ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ತಿಳಿಸಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಇಂದು ಏರ್ಪಡಿಸ ಲಾಗಿದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಲಂಚ ಪಡೆಯುವುದು ಮತ್ತು ನೀಡು ವುದು, ದುರಾಡಳಿತ ಸೇರಿದಂತೆ ಯಾವುದೇ ರೀತಿಯ ಭ್ರಷ್ಟಾಚಾರ ಅಪರಾಧವಾಗುತ್ತದೆ. ಭ್ರಷ್ಟಾಚಾರ ಕುರಿತು ಅರಿವು ಮೂಡಿಸಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ ಜಾರಿಗೆ ತಂದಿದೆ. ಆದರೆ ಇದು ಪರಿಣಾಮ ಕಾರಿಯಾಗಿ ಅನುಷ್ಟಾನಕ್ಕೆ ಬಂದಿಲ್ಲ ಎಂದೆನ್ನಿಸು ತ್ತಿದೆ. ಸರ್ಕಾರಿ ನೌಕರರ ಬಗ್ಗೆ ಸಾರ್ವಜನಿಕರು, ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ರೀತಿ ಋಣಾತ್ಮಕ ಅಭಿಪ್ರಾಯವಿದೆ.

ಇತ್ತೀಚೆಗೆ ಅನೇಕ ಸಾರ್ವಜನಿಕ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ, ಎಸಿಬಿ ದಾಳಿ ನಡೆಸುತ್ತಿ ರುವುದನ್ನು ಸಹ ಕಾಣಬಹುದಾಗಿದೆ. ಒಮ್ಮೆ ಈ ಪ್ರಕರಣದೊಳಗೆ ಸಿಲುಕಿಕೊಂಡರೆ ೧೦ ರಿಂದ ೧೫ ವರ್ಷ ವಿಚಾರಣೆ ಇತರೆ ಪ್ರಕ್ರಿಯೆಗ ಳೆಂದು ಅದೇ ಶಿಕ್ಷೆಯಾಗಿ ಪರಿಣಮಿಸುತ್ತವೆ.


ಸರ್ಕಾರಿ ಅಧಿಕಾರಿಗಳಾಗಿ ಒಳ್ಳೆಯ ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದೇವೆ. ಸರ್ಕಾರ ನಮಗೆ ಉತ್ತಮ ವೇತನ, ಸೌಲಭ್ಯಗಳ ಜೊತೆಗೆ ನಿವೃತ್ತಿ ಹೊಂದಿದ ನಂತರವೂ ನಮ್ಮ ಕಾಳಜಿ ವಹಿಸುತ್ತಿದೆ. ಯಾವುದೇ ದುರಾಸೆಗೆ ಈಡಾಗದೇ ಬದ್ದತೆಯಿಂದ ಕೆಲಸ ಮಾಡ ಬೇಕು. ಕೋವಿಡ್ ಸಮಯದಲ್ಲಿ ಸಹ ಸರ್ಕಾರ ನಮ್ಮ ಹಿತ ಕಾದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಮುಂದೆ ಬದುಕುವ ದಾರಿ ತೋರಬೇಕು ಹೊರತು ಸಂಪಾದನೆ ಹಿಂದೆಯೇ ಬೀಳಬಾರದು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಕೇವಲ ಲಂಚ ಪಡೆಯುವುದು, ನೀಡುವುದು ಮಾತ್ರವಲ್ಲ, ದುರಾಡಳಿತ ಮತ್ತು ಕರ್ತವ್ಯ ಲೋಪ ಸಹ ಭ್ರಷ್ಟಾಚಾರವೆಂದು ಬಹಳ ಜನರಿಗೆ ಅರಿವಿಲ್ಲ. ಉದ್ದೇಶಪೂರ್ವಕವಾಗಿ ಯಾವುದೇ ಕಡತವನ್ನು ಬಾಕಿ ಇಟ್ಟುಕೊಂಡರೆ ಅದು ಕೂಡ ಭ್ರಷ್ಟಾಚಾರ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಎಸಿಬಿ, ಲೋಕಾ ಯುಕ್ತ, ಸಾಮಾಜಿಕ ಮಾಧ್ಯಮದಂತಹ ಅನೇಕ ಕಾವಲುಗಾರರು ನಮ್ಮ ವ್ಯವಸ್ಥೆಯಲ್ಲಿ ಇದ್ದು, ಎಚ್ಚರಿಕೆಯಿಂದ ಕೆಲಸ ಮಾಡಬೇಕು.


ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ್ ಮಾತನಾಡಿ, ಮೊದಲು ನಾವು ಮಾನವರಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕಾಯ್ದೆ ಪ್ರಕಾರ ಕೇವಲ ಲಂಚ ಮಾತ್ರ ಭ್ರಷ್ಟಾಚಾರ ಅಲ್ಲ. ಕರ್ತವ್ಯ ನಿರ್ಲಕ್ಷ್ಯ, ದುರ್ನಡತೆ ಕೂಡ ಅಪರಾಧ ಎಂದರು.
ಲೋಕಾಯುಕ್ತ ಉಪ ಅಧೀಕ್ಷಕ ಎನ್.ಮೃ ತ್ಯುಂಜಯ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version