ಶಿವಮೊಗ್ಗ, ಜು.೦೨:
ಬಕ್ರೀದ್ ಹಬ್ಬದ ವೇಳೆ ಅನಧಿಕೃತವಾಗಿ ಪ್ರಾಣಿಗಳ ವಧೆ ಹಾಗೂ ಪ್ರಾಣಿ ಸಾಗಾಣಿಕೆ ಮಾಡುವುದನ್ನು ತಡೆಯುವ ಕುರಿತು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.
ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮ ಒಂಟೆ/ಗೋವು ಹತ್ಯೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಸಮಿತಿ ಸಭೆಯಯನ್ನು ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು ಅದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಕ್ರೀದ್ ವೇಳೆ ಕಾನೂನುಬಾಹಿರ ಜಾನುವಾ ರುಗಳ ವಧೆ ಮತ್ತು ಸಾಗಾಣಿಕೆ ಕಂಡು ಬಂದಲ್ಲಿ ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಚಿಸಲಾಗಿರುವ ತಂಡ ಸೂಕ್ತ ವಹಿಸಬೇಕು. ಹಬ್ಬದ ವೇಳೆ ಸಾರ್ವಜನಿಕ ಕಸಾಯಿಖಾನೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು, ತ್ಯಾಜ್ಯವನ್ನು ಅಲ್ಲಲ್ಲಿ ಎಸೆಯದಂತೆ ಸೂಚನೆ ನೀಡಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆ ವತಿಯಿಂದ ಒಂದು ಹೆಚ್ಚುವರಿ ತಂಡ ರಚಿಸಬೇಕು. ಎಂದರು.
ಗಲಭೆ, ದೊಂಬಿಗಳು ಉಂಟಾದಲ್ಲಿ ತಕ್ಷಣ ಪೊಲೀಸ್ ಇಲಾಖೆಯ ತಂಡಕ್ಕೆ ತಿಳಿಸಬೇಕು. ವಿಶೇಷ ತಂಡವು ಹಬ್ಬದ ಸಮ ಯದಲ್ಲಿ ನಿಗದಿಪಡಿಸಲಾದ ಸಮಯದವರೆಗೆ ಕರ್ತವ್ಯನಿರತರಾಗಿದ್ದು ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಆಗದಂತೆ ನಿಗಾ ವಹಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ, ಆರ‍್ಟಿಓ ಮತ್ತು ಮಹಾನಗರಪಾಲಿಕೆಯು ಪೊಲೀಸ್ ಮತ್ತು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ತಂಡದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಮಾತನಾಡಿ, ಯಾವುದೇ ರೀತಿಯ ಗಲಭೆಯಂತಹ ಘಟನೆ ಸಂಭವಿಸಿದರೆ ತಕ್ಷಣ ನಮಗೆ ತಿಳಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಎಲಿ, ಪಾಲಿಕೆ ಪಶುವೈದ್ಯಾಧಿಕಾರಿ ಡಾ.ರೇಖಾ ಮತ್ತಿತರರಿದ್ದರು.