Site icon TUNGATARANGA

shimoga/ಸಕ್ರೆಬೈಲನ್ನು ಆಕರ್ಷಣೆ ಕೇಂದ್ರವಾಗಿಸಲು ಕ್ರಮ ತುಂಗಾ ಹಿನ್ನೀರಿನಲ್ಲಿ ದೋಣಿವಿಹಾರವನ್ನು ಉದ್ಘಾಟಿಸಿದ: ಸಂಸದಬಿ.ವೈ.ರಾಘವೇಂದ್ರ !..

ಶಿವಮೊಗ್ಗ,
ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆಗಳ ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಅಭಿವೃದ್ಧಿಪ ಡಿಸಲು ಕ್ರಿಯೋಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಅವರು ಇಂದು ಸಕ್ರೆಬೈಲು ಆನೆಗಳ ಬಿಡಾರಕ್ಕೆ ಹೊಂದಿಕೊಂಡಿರುವ ತುಂಗಾ ಹಿನ್ನೀರಿನಲ್ಲಿ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ವತಿಯಿಂದ ನೂತನ ವಾಗಿ ಆರಂಭಿಸಲಾಗಿರುವ ದೋಣಿವಿಹಾರ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಿಕಟ ಪೂರ್ವ ಮುಖ್ಯಮಂತ್ರಿಗಳಾಗಿದ್ದ

ಬಿ.ಎಸ್. ಯಡಿಯೂರಪ್ಪನವರು ಈ ಹಿಂದೆಯೇ ಈ ಪ್ರದೇಶದ ಅಭಿವೃದ್ಧಿಗೆ ಸುಮಾರು ೨೦.೦೦ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಉದ್ದೇಶಿತ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದ ಅವರು, ನಿಗಧಿಪಡಿಸಿದ ಕಾಲಮಿತಿಯಲ್ಲಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.


ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿರುವುದನ್ನು ಗುರುತಿಸಲಾಗಿದೆ. ೪೬೦ಕೋಟಿ ರೂ.ಗಳ ವೆಚ್ಚದಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ಯೋಜನೆ, ೧ಕೋಟಿ ರೂ.ವೆಚ್ಚದಲ್ಲಿ ಹೊಸನ ಗರದ ಕೋಟೆ, ೨ಕೋಟಿ ರೂ.ಗಳ ವೆಚ್ಚದಲ್ಲಿ ಕವಲೇದುರ್ಗ, ೨ಕೋಟಿ ರೂ.ಗಳ ವೆಚ್ಚದಲ್ಲಿ ಶಿವಪ್ಪನಾಯಕನ ಅರಮನೆ, ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿ, ವಿಶೇಷವಾಗಿ ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದರು.


ಪ್ರಸ್ತುತ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ಭೌಗೋಳಿಕ ಚಿತ್ರಣವೇ ಬದಲಾಗಿ, ರಾಜ್ಯದ ಪ್ರವಾಸೋ ದ್ಯಮ ಕ್ಷೇತ್ರದ ಆಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳಲಿದೆ. ಮಾತ್ರವಲ್ಲ ದಿನಂಪ್ರತಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಆಗಮಿ ಸುವ ನಿರೀಕ್ಷೆ ಇದೆ ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡಪ್ರಮಾಣದಲ್ಲಿ ಉದ್ಯೋಗಾ ವಕಾಶಗಳಿವೆ. ಬಹುತೇಕ ರಾಷ್ಟ್ರಗಳು ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಅವಲಂಬಿಸಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ರುದ್ರೇ ಗೌಡ ಅವರು ಮಾತನಾಡಿ, ಸಂಸದ ದೂರದೃ ಷ್ಠಿಯ ಚಿಂತನೆ, ಮತ್ತು ಆಲೋಚನೆಗಳ ಫಲಶೃತಿಯಿಂದಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊ ಳಿಸುವುದು ಸಾಧ್ಯವಾಗಿದೆ ಎಂದರು.


ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ. ನಾಗರಾಜ್, ಸಕ್ರೆಬೈಲಿನ ವ್ಯವಸ್ಥಾಪಕ ಎ.ಪಿ.ಕಿರಣ್, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನ ನಿರ್ದೇಶಕ ರಾಜೇಶ್ ಕಾಮತ್, ಜ್ಯೋತಿಪ್ರಕಾಶ್, ಬಳ್ಳೆಕರೆ ಸಂತೋಷ್, ಮಾಲತೇಶ್ ಸೇರಿದಂತೆ ನಿಗಮದ ಸದಸ್ಯರು, ಗ್ರಾ.ಪಂ.ಅಧ್ಯಕ್ಷೆ ಜಯಶ್ರೀ, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಇತರರಿದ್ದರು.

Exit mobile version