ಶಿವಮೊಗ್ಗ,
ಮುದ್ರಣ ಪತ್ರಿಕೋದ್ಯಮಕ್ಕೆ ಸಾವಿಲ್ಲ. ಸಾವು ಕೂಡ ಆಗಬಾರದು ಎಂದು ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಡಿ. ಹೆಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾ ಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಿದರು.
ಪತ್ರಿಕೋದ್ಯಮ ಇಂದು ಅನೇಕ ಸವಾಲು ಗಳನ್ನು ಎದುರಿಸುತ್ತಿದೆ. ಸಾಮಾಜಿಕ ಜಾಲತಾಣಗಳು, ದೃಶ್ಯ ಮಾಧ್ಯಮಗಳ ನಡುವೆ ಮುದ್ರಣ ಮಾಧ್ಯಮ(ಪ್ರಿಂಟ್ ಮೀಡಿಯಾ) ಉಸಿರಾಡುವುದೇ ಕಷ್ಟವಾಗುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಬೇಕಾದ ಅನಿವಾ ರ್ಯತೆ ಇದೆ. ಮುದ್ರಣ ಪತ್ರಿಕೋದ್ಯಮ ಬದುಕಬೇಕು. ಬದುಕುತ್ತದೆ. ಯಾವುದೇ ರೀತಿಯ ದೃಶ್ಯ ಮಾಧ್ಯಮಗಳನ್ನು ವೀಕ್ಷಿಸಿದರೂ ಕೂಡ ಕೈಯಲ್ಲಿ ಪತ್ರಿಕೆ ಹಿಡಿದು ಓದುವ ಸಂಭ್ರಮವೇ ಬೇರೆ ಎಂದರು.
ಯಾವುದೇ ಪತ್ರಕರ್ತನಿಗೆ ಚಾರಿತ್ರಿಕ ಸಂಗತಿಗಳ ಅರಿವಿರಬೇಕು. ಜವಾಬ್ದಾರಿಗಳನ್ನು ಅರಿಯಬೇಕು. ಹೊಸ ವಿಚಾರಗಳನ್ನು ವರ್ತ ಮಾನಕ್ಕೆ ತಕ್ಕಂತೆ ರೂಪಿಸಬೇಕು. ಋಣಾತ್ಮಕ ವಿಷಯಗಳ ವೈಭವೀಕರಣ ಸಲ್ಲದು. ಪತ್ರಿಕೆಗ ಳಿಗೆ ಅದರದೇ ಆದ ಸ್ಥಾನ ಮಾನವಿರುತ್ತದೆ. ಹಾಸ್ಯದ ಭರದಲ್ಲಿ ವ್ಯಂಗ್ಯ ಸಲ್ಲದು. ಬರವಣಿಗೆ ನಿಷ್ಠುರವಾಗಿರಬೇಕು. ಸ್ವಲ್ಪ ವಿವರಣೆಯೂ ಬೇಕು. ಪತ್ರಿಕೋದ್ಯಮ ಪದವಿ ಮುಗಿಸಿ ಈ ಕ್ಷೇತ್ರಕ್ಕೆ ಕಾಳಿಡುವವರು ಸ್ವಲ್ಪ ಕಾಲ ತರಬೇತಿ ಪಡೆಯುವುದು ಒಳ್ಳೆಯದು. ಪತ್ರಕರ್ತರು ಸದಾ ಅಧ್ಯಯನಶೀಲರಾಗಿರಬೇಕು. ಸಂಶೋಧನಾ ಭಾವನೆ ಇರಬೇಕೆಂದು ಕಿವಿಮಾತು ಹೇಳಿದರು.
ಪತ್ರಿಕೆ ಹಂಚುವವರಿಗೆ ಕೀಳರಿಮೆ ಬೇಡ. ಈ ರಾಷ್ಟ್ರದ ಹೆಮ್ಮೆ ವಿಜ್ಞಾನಿ ಹಾಗೂ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಮನೆ ಮನೆಗೆ ಪತ್ರಿಕೆ ಹಂಚಿದವರೇ. ಇದನ್ನು ನೆನಪಿಟ್ಟುಕೊಳ್ಳಿ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಪತ್ರಿಕೋದ್ಯಮ ಬೆಳೆದುಬಂದಿದೆ. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯ ಸಂದರ್ಭ ದಿಂದ ಹಿಡಿದು ಇಲ್ಲಿಯವರೆಗೆ ಅನೇಕ ಬಾರಿ ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಂಡಿರುವುದನ್ನು ನಾವು ಕಾಣುತ್ತೇವೆ. ಇದರ ಜೊತೆಗೆ ಪತ್ರಕರ್ತರು ಮಂಡಿಯೂರಿದ ಧೀನರಾದ ಉದಾಹರಣೆಗಳೂ ಇವೆ ಎಂದರು.
ಪತ್ರಕರ್ತರ ಸಂಘದ ರಾಜ್ಯಸಮಿತಿ ಸದಸ್ಯ ಎನ್. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಪತ್ರಿಕೋದ್ಯಮ ಇಂದು ವಿಭಿನ್ನವಾಗಿ ಬೆಳೆಯುತ್ತಿದೆ. ಶಿವಮೊಗ್ಗ ಪತ್ರಕರ್ತರ ಸಂಘಕ್ಕೆ ೪೦ ವರ್ಷವಾದರೆ ರಾಜ್ಯ ಪತ್ರಕರ್ತರ ಸಂಘಕ್ಕೆ ೧೦೦ ವರ್ಷವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ಎಷ್ಟು ಸಾಧ್ಯವೋ ಅಷ್ಟು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕ ರ್ತರ ಸಂಘಕ್ಕೆ ಒಂದು ನಿವೇಶನ ಬೇಕಾಗಿದೆ. ಜಿಲ್ಲಾಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸು ತ್ತಾರೆ ಎಂಬ ನಂಬಿಕೆ ಇದೆ ಎಂದ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ಬಹುಮುಖ್ಯ ವಾಗಿದೆ. ಸಂಘಟನೆ ಸದೃಢವಾಗಲು ಜಿಲ್ಲಾಡಳಿತದ ನೆರವು ಅಗತ್ಯ ಎಂದರು.
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಪತ್ರಕ ರ್ತರಿಗೆ ಗುರುತಿನ ಪತ್ರ ವಿತರಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡುವ ಭರವಸೆ ನೀಡಿದರು. ಪತ್ರಕರ್ತರು ಕಷ್ಟದಲ್ಲಿರುವುದು ನಿಜ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಸಂಘವು ಪತ್ರಕರ್ತರ
ಕಲ್ಯಾಣಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲಿ. ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಎ. ಪೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾ ಧ್ಯಕ್ಷ ಆರ್.ಎಸ್. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಜಿ. ಪದ್ಮನಾಭ್, ಕಾಲೇಜಿನ ಪ್ರಾಂಶುಪಾಲೆ ಡಾ. ಸಂಧ್ಯಾ ಕಾವೇರಿ ಕೆ. ಮುಂತಾದವರಿದ್ದರು. ವಿಭಾ ಸ್ವಾಗತಿಸಿದರು