Site icon TUNGATARANGA

ಸಾಗರ/ರೋಗಿಗಳಿಗೆ ಸರಬರಾಜು ಮಾಡುವ ಪಥ್ಯಾಹಾರದಲ್ಲೂ ಭ್ರಷ್ಟಾಚಾರ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ!…

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಪಥ್ಯಾಹಾರ ಸರಬರಾಜು ಟೆಂಡರ್‌ನಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಇಂದು ನಗರ ಕಾಂಗ್ರೇಸ್ ವತಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ರೋಗಿಗಳಿಗೆ ಸರಬರಾಜು ಮಾಡುವ ಪಥ್ಯಾಹಾರದಲ್ಲೂ ಭ್ರಷ್ಟಾಚಾರ ನಡೆಸಿರುವುದು ದುರದೃಷ್ಟಕರ ಸಂಗತಿ. ಒಂದರ್ಥದಲ್ಲಿ ಅಧಿಕಾರವನ್ನು ದಿವಾಳಿತನದ ಕಡೆ ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ಅಡುಗೆ ಮನೆ ಇಲ್ಲದ ಕಡೆ ಹೊರಗಿನಿಂದ ಪಥ್ಯಾಹಾರ ತರಿಸುವ ನಿಯಮ ಇದ್ದಾಗ್ಯೂ ಸಾಗರ ಆಸ್ಪತ್ರೆಯಲ್ಲಿ ನಿಯಮ ಮೀರಿ ಗುತ್ತಿಗೆದಾರರಿಂದ ಆಹಾರ ತರಿಸಿಕೊಳ್ಳುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ

. ಪ್ರತಿಭಟನೆ ಮೂಲಕವೇ ಸರ್ಕಾರವನ್ನು ಎಚ್ಚರಿಸುವ ಸ್ಥಿತಿ ಬಂದಿರುವುದು ಬೇಸರದ ಸಂಗತಿ. ಟೆಂಡರ್ ರದ್ದುಪಡಿಸುವಂತೆ ಸಚಿವರಿಗೆ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.


ನಗರ ಕಾಂಗ್ರೇಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಪಥ್ಯಾಹಾರ ಸರಬರಾಜು ಮಾಡುವಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ವೈದ್ಯಾಧಿಕಾರಿ ಡಾ. ಪರಪ್ಪ ಹಿಂದೆ ಕಡೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಡೂರಿನವರಿಗೆ ಆಹಾರ ಸರಬರಾಜು ಗುತ್ತಿಗೆಯನ್ನು ನೀಡಲಾಗಿದೆ. ಗುತ್ತಿಗೆ ಹಿಡಿದವರು ಸಾಗರದ ಬಿಜೆಪಿ ಮುಖಂಡರೊಬ್ಬರಿಗೆ

ಆಹಾರ ಸರಬರಾಜು ಮಾಡು ಒಳ ಗುತ್ತಿಗೆ ನೀಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ೬೦ ರೂಪಾಯಿಗೆ ಸಿಗುವ ಊಟಕ್ಕೆ ೧೯೦ ರೂಪಾಯಿ ನಿಗಧಿಪಡಿಸಲಾಗಿದೆ. ಸರ್ಕಾರಕ್ಕೆ ತಿಂಗಳಿಗೆ ಬರೋಬರಿ ಏಳರಿಂದ ಎಂಟು ಲಕ್ಷ ರೂಪಾಯಿ ನಷ್ಟವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದ್ದರೂ ಶಾಸಕರು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ತಕ್ಷಣ ಟೆಂಡರ್ ರದ್ದುಪಡಿಸದೆ ಹೋದಲ್ಲಿ ಆಸ್ಪತ್ರೆಯೊಳಗೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಮಹಿಳಾ ಕಾಂಗ್ರೇಸ್ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಹಾಬಲ ಕೌತಿ, ತಾರಾಮೂರ್ತಿ, ಡಿ.ದಿನೇಶ್, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಕೆ.ಸಿದ್ದಪ್ಪ, ಅನ್ವರ್ ಭಾಷಾ, ಮರಿಯಾ, ಸಂತೋಷ್, ಯಶವಂತ ಪಣಿ, ನಾರಾಯಣ ಅರಮನೆಕೇರಿ, ಸೈಯದ್ ತಾಹೀರ್, ಸಚಿನ್, ರವಿಕುಮಾರ್, ಷಣ್ಮುಖ, ಹಮೀದ್, ರಮೇಶ್ ಚಂದ್ರಗುತ್ತಿ ಇನ್ನಿತರರು ಹಾಜರಿದ್ದರು

Exit mobile version