ಶಿವಮೊಗ್ಗ ,ಆ.23:
ಶಿವಮೊಗ್ಗದ ಸಿಟಿ ಆಸ್ಪತ್ರೆಯ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಮಲ್ಲೇಶ್ ಹುಲ್ಲಮನಿ ದೈವಾಧೀನರಾಗಿದ್ದಾರೆ.
ಶಿವಮೊಗ್ಗದ ವೈದ್ಯ ಜಗತ್ತಿನ ಹಿರಿಯ ಕಿರಿಯರೆಲ್ಲರಿಗೂ ಮಾರ್ಗದರ್ಶಕರಾಗಿ, ಖಾಸಗಿ ಆಸ್ಪತ್ರೆಗಳ ಉಳಿವಿಗೆ ಹಾಗೂ ಅಲ್ಲಿನ ವೈದ್ಯ ಜಗತ್ತಿನ ಸಮಸ್ತರ ರಕ್ಷಣೆಗೆ ಸದಾ ಹೋರಾಡಿ ನ್ಯಾಯ ದೊರಕಿಸಿಕೊಟ್ಟ ರಾಜ್ಯದ ಪ್ರಮುಖರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಮಲ್ಲೇಶ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಸಾವು ಕಂಡಿದ್ದಾರೆ.
ಕೋವಿಡ್ 19 ತಗುಲಿದ ಬೆನ್ನಲ್ಲೆ ಬಿಪಿ ಹೊರತುಪಡಿಸಿ ಆರೋಗ್ಯದಾಯಕರಾಗಿದ್ದ ಡಾ. ಮಲ್ಲೇಶ್ ಅವರ ಸಾವು ಇಡೀ ವೈದ್ಯಲೋಕವನ್ನು ತಬ್ಬಿಬ್ಬು ಮಾಡಿದೆ.
ಕೆಪಿಎಂಇಎ ರಾಜ್ಯ ಅಧ್ಯಕ್ಷರಾಗಿದ್ದ ಡಾ. ಮಲ್ಲೇಶ್ ಅವರು ಖಾಸಗಿ ಆಸ್ಪತ್ರೆಗಳ ಹಾಗೂ ಅಲ್ಲಿನ ವೈದ್ಯ ಲೋಕದ ಸಮಸ್ತರ ರಕ್ಷಣೆಗೆ ಕಾನೂನಾತ್ಮಕ ರೂಪಣೆ ಮಾಡಿದ ಮೇದಾವಿಗಳು ಎನ್ನಲೇಬೇಕು.
ಡಾ. ಮಲ್ಲೇಶ್ ಅವರು ಪತ್ನಿ ವೈದ್ಯೆ ಡಾ. ಶಶಿಕಲಾ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಆಪ್ತರಾಗಿದ್ದ ಮಲ್ಲೇಶ್ ಅವರು ಕೆಪಿಸಿಸಿ ವೈದ್ಯಕೀಯ ವಿಭಾಗದ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಡಾ. ಮಲ್ಲೇಶ್ ಅವರು ಶಿವಮೊಗ್ಗ ಐಎಂಎ ಅಧ್ಯಕ್ಷರಷ್ಟೆ ಅಲ್ಲೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುವ ಕಾರ್ಯಗಳ ಜವಾಬ್ಧಾರಿ ಹೊತ್ತಿದ್ದಾರೆ.
ಡಾ. ಮಲ್ಲೇಶ್ ಅವರ ಸಾಧನೆ, ಅವರ ಶ್ರಮ, ವೈದ್ಯಲೋಕದೊಂದಿಗಿನ ಆತ್ಮೀಯತೆ, ಅವರ ಬೆನ್ತಟ್ಟುವಿಕೆಯ ಎಲ್ಲರಿಗೂ ಅಗೋಚರ ಶಕ್ತಿಯಾಗಿ ಗುರುತಿಸಲ್ಪಡುತ್ತದೆ.
ಈಗಷ್ಟೆ ಬಂದ ವೈದ್ಯರಿಂದ ಹಿಡಿದು ಹಿರಿಯ ವೈದ್ಯರೆಲ್ಲರ ಸಮಸ್ಸೆಗಳಿಗೆ ಸ್ಪಂದಿಸುವ ಮೂಲಕ ಎಲ್ಲರ ಶಕ್ತಿಯಾಗಿದ್ದರೆಂದು ಹೇಳುವ ಸಿಮ್ಸ್ ಸದಸ್ಯರು ಹಾಗೂ ಐಎಂಎ ಮಾಜಿ ಅದ್ಯಕ್ಷೆ ಡಾ. ವಾಣಿ ಕೋರಿ ಅವರು ಇದೊಂದು ಅಘಾತದ ನೋವಿನ , ದುಃಖದ ವಿಷಯ ಎಂದಿದ್ದಾರೆ.