Site icon TUNGATARANGA

ಮಲೆನಾಡಿನಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ, ಸಕಾರಾತ್ಮಕ ಸ್ಪಂದನೆ: ಬಿ.ವೈ.ರಾಘವೇಂದ್ರ

ಶಿವಮೊಗ್ಗ,ಜೂ.24: ಮಲೆನಾಡು ಪ್ರದೇಶಗಳಲ್ಲಿ ಕಾಲುಸಂಕ ನಿರ್ಮಾಣ, ಅಂಗನವಾಡಿ ಕೇಂದ್ರಗಳ ರಕ್ಷಣೆಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ದಿ & ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.


ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 634 ಕಾಲು ಸಂಕಗಳನ್ನು ನಿರ್ಮಾಣ ಮಾಡುವುದಕ್ಕೆ ಮತ್ತು ಲೋಕಸಭಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ರಕ್ಷಣೆ ಒದಗಿಸಲು, 805 ಅಂಗನವಾಡಿ ಕೇಂದ್ರಗಳ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಮಾಲೋಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಮತ್ತು ಮಲೆನಾಡು ಪ್ರದೇಶವನ್ನು ಒಳಗೊಂಡಿರುವ ವಿಶಿಷ್ಟವಾದ ಭೂಸ್ವರೂಪವನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಲೆನಾಡು ಪ್ರದೇಶಗಳಲ್ಲಿ ಅಂದಾಜು 4954 ಕುಗ್ರಾಮಗಳಿದ್ದು, ಮಾನವ ವಾಸವು ಚದುರಿದ ಮತ್ತು ಗುಡ್ಡಗಾಡು ಪರ್ವತಗಳಲ್ಲಿ ವಾಸಿಸುವ ಹಾಗೂ ಮಳೆಗಾಲದಲ್ಲಿ ತುಂಬಿ ಹರಿಯುವ ಸಣ್ಣ ತೊರೆಗಳನ್ನು ಶಾಲಾ ಮಕ್ಕಳು ಸ್ಥಳೀಯ ಕಾಲು ಸೇತುವೆಗಳ ಮೇಲೆ ದಾಟುವುದು ಕಷ್ಟಕರ ಮತ್ತು ಸವಾಲಿನದ್ದಾಗಿದ್ದು, ಅಸಮರ್ಪಕ ರಸ್ತೆ ಸಂಪರ್ಕದಿಂದ ಜನ ಮತ್ತು ಜಾನುವಾರುಗಳು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಅಲ್ಲದೇ ಜನರು ತಮ್ಮ ಸ್ಥಳಗಳಿಗೆ ತಲುಪಲು ದೂರದ ಪ್ರಯಾಣವನ್ನು ತಡೆಯಲು ಮಕ್ಕಳಿಗೆ ಮತ್ತು ನಾಗರೀಕರಿಗೆ ಸೂಕ್ತವಾದ ರಕ್ಷಣೆಯನ್ನು ನೀಡಬೇಕಾಗಿರುವ ಕುರಿತು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ.

ಈ ಬಗ್ಗೆ ಸಮಿತಿ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿರುವುದಕ್ಕೆ ಸಂಸದರು ಕೇಂದ್ರ ಗ್ರಾಮೀಣಾಭಿವೃದ್ದಿ & ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಯಾದವ್ ಅವರಿಗೆ ಅಭಿನಂದಿಸಿದ್ದಾರೆ.

Exit mobile version