ಶಿವಮೊಗ್ಗ
ಪತ್ರಕರ್ತರು ವಸ್ತುನಿಷ್ಠವಾಗಿರಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿ ಸಿದ್ದ ಸಂಘದ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆ, ಟಿವಿ ವಾಹಿನಿಗಳ ಮೂಲಕ ವೈಯಕ್ತಿಕ ಸಿದ್ಧಾಂತವನ್ನು ಜನರ ಮೇಲೆ ಹೇರದೆ ಸತ್ಯ, ವಸ್ತು ನಿಷ್ಠ ಸುದ್ದಿಗಳನ್ನು ನೀಡುವ ಮೂಲಕ ತುರ್ತು ಪರಿಸ್ಥಿತಿ ಕಾಲದ ಪತ್ರಿಕೋದ್ಯ ಮವನ್ನು ಮರುಕಳಿಸಬೇಕಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಎಲ್ಲಾ ಪತ್ರಿಕೆಗಳು ಮುಖಪುಟವನ್ನು ಖಾಲಿ ಬಿಟ್ಟು ಪತ್ರಿಕೆ ನೀಡುವ ಮೂಲಕ ವಿಶೇಷ ಪ್ರತಿಭಟನೆ ನಡೆಸಲಾಗಿತ್ತು. ಇದು ಜನರ ಮೇಲೆ ದೊಡ್ಡ ಪ್ರಭಾವ ಉಂಟುಮಾಡಿತ್ತು ಎಂದರು.
ಹಿಂದೆ ಪತ್ರಕರ್ತರಿಗೆ ಇದ್ದ ಧೈರ್ಯವನ್ನು ಈಗಿನ ಪತ್ರಕರ್ತರು ತೋರುತ್ತಿಲ್ಲ. ವಸ್ತು ನಿಷ್ಠ ಹಾಗೂ ಸತ್ಯ ವರದಿಗಳನ್ನು ನೀಡಬೇಕಿದೆ. ಯಾವುದೇ ಒಂದು ಯೋಜನೆ ಜಾರಿಗೆ ತಂದರೂ ಅದನ್ನು ವಿರೋಧಿಸುವ ಕೆಲಸ ಇಂದು ನಡೆಯುತ್ತಿದೆ. ಇದಕ್ಕೆ ಬೆಂಬಲಿಸುವ ಮುನ್ನ ಯೋಜಿಸಬೇಕಿದೆ. ವಿರೋಧಿಸುವುದಕ್ಕಿಂತ ಮುಖ್ಯವಾಗಿ ಚರ್ಚೆ ನಡೆಸಿ ಲೋಪದೋಷಗಳನ್ನು ಸರಿಪಡಿಸಿ ಮುಂದುವರಿಯಬೇಕಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಮಾಧ್ಯಮ ಕ್ಷೇತ್ರ ಇಂದು ಬಹಳಷ್ಟು ಬೆಳೆದಿದೆ. ಡಿಜಿಟಲ್ ತಂತ್ರಜ್ಞಾನದಿಂದಾಗಿ ಈ ಕ್ಷೇತ್ರ ಕ್ಷಿಪ್ರವಾಗಿ ಬೆಳೆದಿದ್ದು, ಕ್ಷಣ ಮಾತ್ರದಲ್ಲಿ ಸುದ್ದಿಗಳು ಜನರಿಗೆ ತಲುಪುತ್ತಿವೆ ಎಂದು ಹೇಳಿದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಕಲಿ ಹಾಗೂ ಪೀಡಕ ಪತ್ರಕರ್ತರು, ಯು ಟ್ಯೂಬ್ ಪತ್ರಕರ್ತರನ್ನು ಸುದ್ದಿಮನೆಯಿಂದ ತೆಗೆದು ಸ್ವಚ್ಛ ಮಾಡದಿದ್ದರೆ ನಾವೇ ಸಮಾಜಕ್ಕೆ ವಂಚನೆ ಮಾಡಿದಂತಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಏಷ್ಯಾ ಸಮಿತಿ ಸದಸ್ಯ ಹೆಚ್.ಬಿ. ಮದನಗೌಡ ಮಾತನಾಡಿ, ದೇಶದಲ್ಲಿ ಸತ್ಯ ಬರೆದ ೪೦ ಪತ್ರಕರ್ತರನ್ನು ಒಂದೇ ವರ್ಷದಲ್ಲಿ ಹತ್ಯೆ ಮಾಡಲಾಗಿದೆ. ಮಾಧ್ಯಮ ಸಂಸ್ಥೆಗಳು ರಾಜಕಾರಣಿ ಗಳ ಕೈಯಲ್ಲಿರುವುದರಿಂದ ಸತ್ಯ ವರದಿಗಳು ಭಿತ್ತರಗೊಳ್ಳು ವುದು ಕಷ್ಟವಾಗುತ್ತದೆ ಎಂದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸರ್ಕಾರಿ ನೌಕರರು ಪಡೆಯುವ ಆರೋಗ್ಯ ಸೌಲಭ್ಯದಂತೆ ಪತ್ರಕರ್ತರು ಕೂಡ ಸೌಲಭ್ಯ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಶಿವಾನಂದ ತಗಡೂರು, ಹೆಚ್.ಬಿ. ಮದನಗೌಡ, ಜೆ.ಸಿ. ಲೋಕೇಶ್, ಅಜ್ಜಮಾಡ ರಮೇಶ್, ಪುಂಡಲೀಕ ವಿ. ಬಾಳೋಜಿ, ಭವಾನಿಸಿಂಗ್, ಮತ್ತಿಕೆರೆ ಜಯರಾಂ, ಲಿಂಗಪ್ಪ ಚಾವಡಿ, ಡಾ. ಮಹೇಶ್ ಮೂರ್ತಿ, ಟೆಲೆಕ್ಸ್ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದು, ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಮೇಯರ್ ಸುನಿತಾ ಅಣ್ಣಪ್ಪ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ವಾರ್ತಾಧಿಕಾರಿ ಶಫಿ ಸಾದುದ್ದೀನ್, ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಜಿ. ಪದ್ಮನಾಭ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಮತ್ತಿತರರು ಇದ್ದರು.