ಶಿವಮೊಗ್ಗ,
ಕೇಂದ್ರ ಸರ್ಕಾರದ ದಮನಕಾರಿ ನೀತಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆದರಿಸಲು ಜಾರಿ ನಿರ್ದೇಶನಾಲಯ(ಇಡಿ) ದುರ್ಬಳಕೆ ಮಾಡಿಕೊಂಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣ ಪ್ರವೇಶಿ ಸುವ ಮುನ್ನವೇ ಬ್ಯಾರಿಕೇಡ್ ತಡೆಗೋಡೆ ರಚಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರು ಬ್ಯಾರಿಕೇಡ್ ದಾಟಿ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಪ್ರಯತ್ನಿಸಿ ದಾಗ ಕಚೇರಿ ಪ್ರವೇಶಿಸುವ ಮುನ್ನವೇ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಇಡಿ ನೋಟಿಸ್ ನೀಡಿದ್ದು ರಾಹುಲ್ ಗಾಂಧಿ ಅವ ರನ್ನು ವಿನಾಕಾರಣ ವಿಚಾರಣೆ ನಡೆಸಿರುವುದು ಮಾತ್ರವಲ್ಲದೇ ಬಂಧನಕ್ಕೆ ಸರ್ಕಾರ ಇಡಿ ಮೂಲಕ ಒತ್ತಡ ಹೇರುತ್ತಿರುವುದರಿಂದ ಮತ್ತು ಕಾಂಗ್ರೆಸ್ ನಾಯಕರಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಹಾಗೂ ಕಾಂಗ್ರೆಸ್ ಸಂಸದರು ಮತ್ತು ಎಐಸಿಸಿ ನಾಯಕರು ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕುವುದರ ಜೊತೆಗೆ ಪ್ರತಿಭಟನೆಗೂ ಅವಕಾಶ ನೀಡದೇ ಸಂವಿಧಾನದತ್ತವಾಗಿದ್ದ ಹಕ್ಕನ್ನೇ ಮೊಡಕುಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪೊಲೀಸ್ ನಡೆ ಖಂಡಿಸಿ ಇಂದು ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಅದನ್ನು ಹತ್ತಿಕ್ಕಲು ಪೊಲೀಸ್ ಶಕ್ತಿ ಬಳಸಿದ್ದಲ್ಲದೇ, ಪಕ್ಷದ ಹಿರಿಯ ಮತ್ತು ಗೌರವಾನ್ವಿತ ನಾಯಕರನ್ನು ಮತ್ತು ಸಂಸದರನ್ನು ಕೂಡ ಅತ್ಯಂತ ಅಮಾನವೀಯವಾಗಿ ಕೆಟ್ಟದಾಗಿ ನಡೆಸಿಕೊಂಡಿದೆ. ಅಷ್ಟೇ ಅಲ್ಲದೇ ಎಐಸಿಸಿ ಕಚೇರಿ ಯೊಳಗೇ ನುಗ್ಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಇದರಿಂದ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿ ಲೆದ್ದಿದ್ದು, ಕೇಂದ್ರ ಸರ್ಕಾರದ ಈ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಗಳನ್ನು ಮತ್ತು ದ್ವೇಷದ ರಾಜಕಾರಣ ವಿರೋಧಿಸಿ ಕೆಪಿಸಿಸಿ ನಿನ್ನೆ ರಾಜಭವನ್ ಚಲೋ ಕೂಡ ನಡೆಸಿತ್ತು ಎಂದರು.
ಇಂದಿನಿಂದ ಕಾಂಗ್ರೆಸ್ ಪಕ್ಷ ಈ ಪ್ರತಿಭಟನೆಯನ್ನು ರಾಷ್ಟ್ರವ್ಯಾಪಿ ನಡೆಸಲು ತೀರ್ಮಾನಿಸಿದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಅನಿತಾ ಕುಮಾರಿ, ಹೆಚ್.ಸಿ. ಯೋಗೇಶ್, ಎಸ್.ಪಿ. ದಿನೇಶ್, ಇಸ್ಮಾಯಿಲ್ ಖಾನ್, ಮಧುಸೂದನ್, ಚೇತನ್, ರಂಗನಾಥ್, ವಿಜಯ ಲಕ್ಷ್ಮಿ ಪಾಟೀಲ್, ಸ್ಟೆಲ್ಲಾ ಮಾರ್ಟಿನ್, ಸೌಗಂಧಿಕಾ, ಚಂದ್ರಶೇಖರ್ ಮೊದಲಾದವರಿದ್ದರು.