ಶಿವಮೊಗ್ಗ, ಜೂ.೧೪:
ಶಿವಮೊಗ್ಗ ಜಿಲ್ಲೆಯ ವಿಶೇಷ ಚೇತನ(ಅಂಗವಿಕಲ)ರನ್ನು ಗುರುತಿಸಿ ಅವರಿಗೆ ಸರ್ಕಾರದ ಸವತ್ತುಗಳನ್ನು ಹಾಗೂ ವಿಶೇಷ ಸೌಲಭ್ಯಗಳನ್ನು ಕೊಡಿಸುವಂತಹ ಕೆಲಸವನ್ನು ಶಿವಮೊಗ್ಗ ಜಿಲ್ಲಾ ಅಂಗವಿಕಲರ ಕಲ್ಯಾಣ ಕಛೇರಿ ಎಲ್ಲಿದೆ ಗೊತ್ತಾ.? ಎಲ್ಲಾ ವಿಶೇಷ ಚೇತನರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಂಡು ಅವರಿಗೆ ಸಿಗುವ ಪ್ರತಿ ಮಾಸಿಕ ವೇತನ ಕೊಡಿಸುವ ಹಾಗೂ ಸಂಬಂಧಪಟ್ಟ ಚಿಕಿತ್ಸೆಯ ಮತ್ತು ಯಂತ್ರೋಪಕರಣಗಳ ಮತ್ತು ಸ್ಥಳೀಯವಾಗಿ ಓಡಾಡಲು ಬಸ್‌ಗಳ ಕೂಪನ್ ನೀಡುವ ಅತಿ ದೊಡ್ಡ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಕೇಂದ್ರ ಕಚೇರಿ ಶಿವಮೊಗ್ಗದ ಬಿ.ಹೆಚ್.ರಸ್ತೆ ಅಂದರೆ ಸಾಗರ ರಸ್ತೆಯ ಬಿಎಸ್‌ಎನ್‌ಎಲ್ ಕಛೇರಿ ಮಗ್ಗುಲಲ್ಲಿ, ಆಲ್ಕೋಳ ಸರ್ಕಲ್ ಬಳಿ ಇರುವ ಈ ಕಚೇರಿಯು ಅತ್ಯಂತ ಪುರಾತನ ಕಾಲದ ಹೆಂಚಿನ ಸೋರುವ ಕಟ್ಟಡವಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೆ ಕರ್ತವ್ಯಗಳು ನಡೆಯುತ್ತವೆ. ನಂತರ ಈ ಕಛೇರಿಯ ಮುಂದಣ ಜಾಗ ಕತ್ತಲು ಕಾಯುತ್ತದೆ. ಆ ನಂತರ ಭಾರಿ ಭರ್ಜರಿ ಕುಡುಕರ ಸಾಮ್ರಾಜ್ಯ ಸೇರಿ ನಿತ್ಯ ರಾತ್ರಿ ಹತ್ತು ಹನ್ನೊಂದರ ವೆರೆಗೆ ಎಣ್ಣೆಯಾಟ, ತಿನಿಸುಗಳ ಸರಬರಾಜು ಜಾಲಿಯಾಗಿ ನಡೆಯುತ್ತದೆ. ಅಲ್ಲಿ ಉಳಿಯುವ ಎಲ್ಲಾ ಬಾಟಲ್‌ಗಳು, ತಿನಿಸುಗಳು ಅವುಗಳನ್ನು ಪ್ಯಾಕ್‌ಮಾಡಿದ್ದ ಕವರ್‌ಗಳು ಅಲ್ಲಿಗೆ ಮರುದಿನ ಕೆಲಸಕ್ಕೆ ಬರುವ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ನಿತ್ಯ ಸ್ವಾಗತ ಕೋರುತ್ತವೆ.
ಅಂಗವಿಕಲರ ನೂರಾರು ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಇಲಾಖೆಯಲ್ಲಿ ಕಡತಗಳನ್ನು ಇಟ್ಟುಕೊಳ್ಳಲು ಸರಿಯಾದ ಸ್ಥಳವಕಾಶವೇ ಇಲ್ಲ ಎಂಬುದು ಅಲ್ಲಿಗೆ ಹೋಗಿ ಬಂದ ಎಲ್ಲರೂ ಹೇಳುವ ಮಾತಿದು. ಒಳಗಿನ ವ್ಯವಸ್ಥೆ ಇಲ್ಲದ ಕ್ರಮ ಒಂದೆಡೆಯಾದರೆ ಮತ್ತೊಂದೆಡೆ ಹೊರಗೆ ನಿತ್ಯದ ಕುಡುಕರ ದಾಂಧಲೆ ಬಗ್ಗೆ ಇಲಾಖೆಯ ಅಧಿಕಾರಿಗಳು ಬಾಯಿಚಿಚ್ಚಿಲ್ಲವೇ..? ಸಂಬಂಧಪಟ್ಟ ಕನಿಷ್ಠ ರಾತ್ರಿ ಗಸ್ತಿನ ಪೊಲೀಸರಾದರೂ ಇವರನ್ನು ನೋಡಿದ್ದಾರಾ..?
ಅನುಮಾನಗಳ ಹುತ್ತದ ನಡುವೆ ಕಛೇರಿ ಮುಂದಣ ಆವರಣ ನಿಂತಿದೆ ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದ ಚಿತ್ರಗಳು ನಿಮ್ಮ ಮುಂದಿದೆ. ಮಿಕ್ಕೆಲ್ಲಾ ತೀರ್ಮಾನ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳದು. ಸಮಸ್ತ ದೊಡ್ಡ ಜವಾಬ್ದಾರಿ ಹೊತ್ತ ಜಿಲ್ಲಾಧಿಕಾರಿಗಳದು. ಏನಾಗುತ್ತದೆ ಎಂಬುದನ್ನು ನೋಡುವುದಷ್ಟೆ ಪತ್ರಿಕೆ ಕೆಲಸ