Site icon TUNGATARANGA

ಭದ್ರಾವತಿ/ ನಾಲ್ವರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ, ಜೂ.10:
ಜಮೀನು ವಿಚಾರದಲ್ಲಿ ವ್ಯಕ್ತಿಯೋರ್ವನನ್ನ ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ‌.ದಂಡವಿಧಿಸಿ ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.


2015 ನೇ ಇಸವಿ ಮಾರ್ಚ್ ತಿಂಗಳಲ್ಲಿ ಕವಿತ, ಮಂಜುನಾಥ, ರೂಪ ಹಾಗೂ ಅಂಬರೀಶ್ ಎಂಬುವರು ದಾನವಾಡಿ ಗ್ರಾಮದ ವಾಸಿಯಾದ ಹರೀಶ (23) ಎಂಬುವನೊಂದಿಗೆ ಜಮೀನಿನ ವಿಚಾರವಾಗಿ ಜಗಳ ತೆಗೆದಿದ್ದರು. ಈ ವೇಳೆ ಮಂಜುನಾಥನು ಹರೀಶನ ಎದೆಗೆ ಚಾಕುವಿನಿಂದ ಹಲ್ಲೆ ಮಾಡಿ ರಕ್ತ ಗಾಯ ಪಡಿಸಿರುತ್ತಾರೆ.


ಗಾಯಗೊಂಡ ಹರೀಶನನ್ನು ಚಿಕಿತ್ಸೆ ಸಂಬಂಧ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಸೇರಿಸಲಾಗಿತ್ತು, ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಿನಾಂಕಃ-05-04-2015 ರಂದು ಹರೀಶನು ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿದ್ದನು. ಆಗಿನ ತನಿಖಾಧಿಕಾರಿಗಳಾದ ಪಿಐ ಭದ್ರಾವತಿ ರಮೇಶ್ ಪ್ರಕರಣದಲ್ಲಿ ಕಲಂ 302 ಐಪಿಸಿಯನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಶ್ರೀಮತಿ ರತ್ನಮ್ಮ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು,ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮಾನ್ಯ ನ್ಯಾಯಧೀಶರಾದ ಶಶಿಧರ್ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರಿಗೆ ಶಿಕ್ಷೆ ವಿಧಿಸಿದ್ದಾರೆ.
ಆರೋಪಿತರಾದ 1)ಮಂಜುನಾಥ, 26 ವರ್ಷ, ಚಿಕ್ಕನಕಟ್ಟೆ, ಭದ್ರಾವತಿ, 2) ಕವಿತ, 35 ವರ್ಷ, ದಾನವಾಡಿ, ಭದ್ರಾವತಿ, 3) ರೂಪಾ, 32 ವರ್ಷ, ರಾಮನಕಟ್ಟೆ, ಭದ್ರಾವತಿ ಮತ್ತು 4) ಅಂಬರೀಶ, 21 ವರ್ಷ, ಚಿಕ್ಕನಕಟ್ಟೆ, ಭದ್ರಾವತಿ ರವರುಗಳ ವಿರುದ್ಧ ಕಲಂ 302 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿತರಿಗೂ ಜೀವಾವಧಿ ಶಿಕ್ಷೆ ಮತ್ತು 20,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 02 ವರ್ಷ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ

Exit mobile version