Site icon TUNGATARANGA

ಶಿವಮೊಗ್ಗ/ ಸಮಗ್ರ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನಗೊಳಿಸಲು ಡಿಸಿ, ಸಿಇಓ ಸೂಚನೆ


ಶಿವಮೊಗ್ಗ ಜೂನ್ 10:
ಮಕ್ಕಳು, ಮಹಿಳೆಯರ ಆರೋಗ್ಯ ತಪಾಸಣೆ, ಲಸಿಕಾಕರಣ, ಆರೋಗ್ಯ ಕಾರ್ಡ್, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿರ್ವಹಣೆ ಸೇರಿದಂತೆ ಸಮಗ್ರ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನವನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬರುವ ವಿವಿಧ ಕಾರ್ಯಕ್ರಮಗಳು ಹಾಗೂ ಮಂಕಿಪಾಕ್ಸ್ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ(ಆರ್‍ಬಿಎಸ್‍ಕೆ)ದಡಿ ಸರ್ಕಾರಿ, ಅನುದಾನಿತ ಮತ್ತು ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನ ನಿಯಮಿತವಾಗಿ ಮಾಡಬೇಕು. ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳಿಗೆ ಆರ್‍ಬಿಎಸ್‍ಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವತಿಯಿಂದ ಆರೋಗ್ಯ ತಪಾಸಣೆ ಮಾಡುವ ಮೂಲಕ ಮಕ್ಕಳಲ್ಲಿ ಕಾಣಬಹುದಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಕ್ರಮ ವಹಿಸುವುದು ತುಂಬಾ ಅವಶ್ಯಕವಾಗಿದ್ದು ಡಿಡಿಪಿಐ ರವರು ಆರೋಗ್ಯ ತಪಾಸಣೆ ಆದ ಬಗ್ಗೆ ಪರಿಶೀಲಿಸಬೇಕು. ಹಾಗೂ ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಪರಿಶೀಲಿಸಬೇಕೆಂದರು.


ಜಿಲ್ಲೆಯಲ್ಲಿ ತಾಯಿ ಮತ್ತು ಮಗು ಮರಣ ಆಡಿಟ್‍ನ್ನು ನಿಯಮಿತವಾಗಿ ನಿಯಮಾನುಸಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆರ್‍ಸಿಹೆಚ್‍ಓರವರಿಗೆ ತಾಕೀತು ಮಾಡಿದರು.
ಡಿಎಲ್‍ಓ ಡಾ. ಶಮಾ ಬೇಗಂ ಮಾತನಾಡಿ, ಆಯುಷ್ಮಾನ್ ಆರೋಗ್ಯ ಭಾರತ್ ಯೋಜನೆಯಡಿ ಎಲ್ಲ ಸರ್ಕಾರಿ ಆಸ್ಪತ್ರೆಗಳು ನೋಂದಣಿಯಾಗಿದ್ದು ಇದುವರೆಗೆ 6,45,533 ಕಾರ್ಡ್ ನೀಡಲಾಗಿದೆ. ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನೆ ಕಾರ್ಯಕ್ರಮದಡಿ 2021-22 ನೇ ಸಾಲಿನಲ್ಲಿ ಒಟ್ಟು 35 ಸಕ್ರಿಯ ಕುಷ್ಟರೋಗಿಗಳನ್ನು ಪತ್ತೆಹಚ್ಚಿದ್ದು 26 ಜನರ ರೋಗ ಗುಣಪಡಿಸಲಾಗಿದೆ
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಎಬಿಎಆರ್‍ಕೆ ಯೋಜನೆಯಡಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕಾರ್ಡ್ ಕೊಡುವ ಕೆಲಸ ಆಗಬೇಕು. ನಗರ ಪ್ರದೇಶದಲ್ಲಿ ಸಿಎಸ್‍ಸಿ ಗಳೊಂದಿಗೆ ಸೇರಿ ಶಿಬಿರ ಏರ್ಪಡಿಸಿ ಆರೋಗ್ಯ ಕಾರ್ಡ್ ನೀಡುವ ಯೋಜನೆ ಹಾಕಿಕೊಳ್ಳಬೇಕು. ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಖಿನ್ನತೆ, ಮಾದಕ ವ್ಯಸನ ಮುಕ್ತಿಗೊಳಿಸುವ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಕುಷ್ಟರೋಗಿಗಳು ಹೆಚ್ಚು ಕಂಡುಬರುವ ಪ್ರದೇಶಗಳನ್ನು ಗುರುತಿಸಿ ಸಕ್ರಿಯ ರೋಗ ಪತ್ತೆ ಹೆಚ್ಚಿಸಬೇಕು. ಹಾಗೂ ನೇತ್ರ ತಜ್ಞರು ಇರುವ ತಾಲ್ಲೂಕುಗಳಲ್ಲಿ ತಜ್ಞರು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.


ಜಿಲ್ಲಾ ಟಿಬಿ/ಹೆಚ್‍ಐವಿ ಕಾರ್ಯಕ್ರಮಾಧಿಕಾರಿ ಡಾ.ದಿನೇಶ್ ಮಾತನಾಡಿ, 2022 ನೇ ಸಾಲಿನಲ್ಲಿ ಒಟ್ಟು ಕ್ಷಯರೋಗ ಪತ್ತೆಗಾಗಿ 18822 ಜನರ ಪರೀಕ್ಷೆ ನಡೆಸಲಾಗಿ, 1701 ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. 1206 ರೋಗಿಗಿಗೆ ನಿಕ್ಷಯ್ ಯೋಜನೆಯಡಿ ರೂ.31,0,7000 ಮೊತ್ತ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.


ಡಾ.ಗುಡುದಪ್ಪ ಮಾತನಾಡಿ, 2022ರ ಜನವರಿಯಿಂದ ಏಪ್ರಿಲ್‍ವರೆಗೆ 02 ಮಲೇರಿಯಾ, 45 ಡೆಂಗ್ಯು, 09 ಚಿಕುನ್‍ಗುನ್ಯ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಾದ್ಯಂತ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು, ಎಲ್ಲ ತಾಲ್ಲೂಕುಗಳಲ್ಲಿ ತಜ್ಞರು ಬೆಳಿಗ್ಗೆ ಮತ್ತು ಮಧ್ಯಾಹ್ನ ಒಪಿಡಿಯಲ್ಲಿ ಇರಬೇಕು. ಸಾಂಕ್ರಾಮಿಕ ರೋಗಗಳು ಹೆಚ್ಚಾಗದಂತೆ ತಡೆಯಲು ನೀರಿನ ಪರೀಕ್ಷೆ ಇತರೆ ಕ್ರಮ ಕೈಗೊಳ್ಳಬೇಕು. ಎಆರ್‍ಟಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಹಜ ಹೆರಿಗೆಯನ್ನು ಉತ್ತೇಜಿಸಬೇಕು. ಅಸಾಂಕ್ರಾಮಿಕ ರೋಗಗಳ ತಡೆ ಕಾರ್ಯಕ್ರಮವನ್ನು ಪರಿಣಾಮಕಾರಿ ಅನುಷ್ಟಾನ ಮಾಡಬೇಕು ಹಾಗೂ ಜಿಲ್ಲೆ ತಾಲ್ಲೂಕುಗಳ ಪ್ರೋಗ್ರಾಂ ಮ್ಯಾನೇಜರ್, ಕನ್ಸಲ್ಟೆಂಟ್ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಇನ್ನು ಮುಂದೆ ಪ್ರತಿ ವಾರಕ್ಕೊಮ್ಮೆ ಈ ಸಭೆಯಲ್ಲಿ ಚರ್ಚಿಸಿ ಸೂಚಿಸಲಾದ ವಿಷಯಗಳ ಕುರಿತು ಸಿಇಓ ಅವರೊಂದಿಗೆ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳ ಝೂಮ್ ಸಭೆ ತೆಗೆದುಕೊಂಡು ಪ್ರಗತಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.


ಜಿ.ಪಂ ಸಿಇಓ ಎಂ.ಎಲ್ ವೈಶಾಲಿ ಮಾತನಾಡಿ, ಎಲ್ಲ ತಾಲ್ಲೂಕುಗಳಲ್ಲಿ ಲಸಿಕಾ ಕಾರ್ಯಕ್ರಮದ ಗುರಿ ಸಾಧಿಸಬೇಕು. ಎಲ್ಲ ಮಹಿಳಾ ಶಿಕ್ಷಕಿಯರಿಗೆ ಗರ್ಭಗೊರಳಿನ ಕ್ಯಾನ್ಸರ್ ಮತ್ತು ವಿವಿಧ ರೀತಿಯ ರೋಗಗಳ ಪತ್ತೆಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಶೀಘ್ರದಲ್ಲಿ ಮುಗಿಸಬೇಕು. ಜೊತೆಗೆ ಅಂಗನವಾಗಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರಿಗೆಊ ಆರೋಗ್ಯ ತಪಾಸಣೆ ಮಾಡಿಸಬೇಕೆಂಬ ಆದೇಶವಾಗಿದ್ದು ಇವರಿಗೂ ಸಹ ಆರೋಗ್ಯ ತಪಾಸಣೆ ಕೈಗೊಳ್ಳಬೇಕೆಂದು ಡಿಹೆಚ್‍ಓ ರವರಿಗೆ ಸೂಚನೆ ನೀಡಿದರು.

ಮಂಕಿಪಾಕ್ಸ್ ಖಾಯಿಲೆ ಕುರಿತು ಸಭೆ : ಡಬ್ಲ್ಯುಹೆಚ್‍ಓ ಕನ್ಸಲ್ಟೆಂಟ್ ಡಾ.ಸತೀಶ್ಚಂದ್ರ ಮಾತನಾಡಿ, ಮಂಕಿಪಾಕ್ಸ್ ಒಂದು ಅಕ್ಯೂಟ್ ವೈರಲ್ ಝೂನೊಟಿಕ್ ಖಾಯಿಲೆಯಾಗಿದ್ದು ಸಂಪರ್ಕ, ದೇಹ ದ್ರವ್ಯ, ಗಾಯಗಳು, ರೆಸ್ಪಿರೇಟರಿ ಡ್ರಾಪ್‍ಲೆಟ್ ಮತ್ತು ಮಲಿನಯುಕ್ತ ವಸ್ತುಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೆಂಟ್ರಲ್ ಮತ್ತು ವೆಸ್ಟ್ ಆಫ್ರಿಕನ್ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಈ ಖಾಯಿಲೆ ಇನ್ನೂ ಭಾರತ ದೇಶದಲ್ಲಿ ವರದಿಯಾಗಿಲ್ಲ.
ಜ್ವರ, ದದ್ದು(ರ್ಯಾಶ್), ಉಬ್ಬಿದ ಲಿಂಫ್‍ನೋಡ್ಸ್ ಈ ಕಾಯಿಲೆ ಲಕ್ಷಣ, ಈ ಖಾಯಿಲೆಗೆ ಕೋವಿಡ್ 19 ರೀತಿ 2 ರಿಂದ 4 ವಾರ ಐಸೋಲೇಷನ್‍ನಲ್ಲಿಡಬೇಕು. ಪರೀಕ್ಷೆಯನ್ನು ಪಿಸಿಆರ್, ಸ್ವಾಬ್ ಇತರೆ ರೀತಿ ಮಾಡಬಹುದಾಗಿದ್ದು ಸ್ಯಾಂಪಲ್‍ನ್ನು ಪೂನಾ ಲ್ಯಾಬ್‍ಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ.ಓ.ಮಲ್ಲಪ್ಪ ಮಂಕಿಪಾಕ್ಸ್ ಖಾಯಿಲೆ ಕುರಿತಾದ ಮಾರ್ಗದರ್ಶನಗಳ ಕುರಿತು ವಿವರಿಸಿ, ಇಲ್ಲಿ ರೋಗಿಯ ಪ್ರಯಾಣದ ವಿವರ ಮುಖ್ಯವಾಗುತ್ತದೆ. ರೋಗ ಇರುವ ರಾಷ್ಟ್ರಗಳಿಗೆ ಪ್ರಯಾಣಿಸಿದ ಮತ್ತು ಪ್ರಯಾಣಿಸಿದವರ ಸಂಪರ್ಕ ಇರುವ ರೋಗಿಗಳನ್ನು ಮಂಕಿಪಾಕ್ಸ್ ಖಾಯಿಲೆಗೆ ಶಂಕಿತರನ್ನಾಗಿ ಪರೀಕ್ಷಿಸಬಹುದು ಎಂದರು.
ಜಿಲ್ಲಾಧಿಕಾರಿಗಳು, ಮಂಕಿಪಾಕ್ಸ್ ಖಾಯಿಲೆ ನಮ್ಮ ದೇಶದಲ್ಲಿ ವರದಿಯಾಗಿಲ್ಲ. ಆದರೆ ಮುನ್ನಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 2 ರಿಂದ 4 ಮತ್ತು ನಗರದ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಬೇಕು. ಇಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ರೋಗಿಯ ಟ್ರಾವೆಲ್ ಹಿಸ್ಟರಿ ಅಥವಾ ಅಂತಹ ದೇಶಗಳಿಗೆ ಪ್ರಯಾಣಿ ಬಂದವರೊಂದಿಗೆ ಸಂಪರ್ಕ ಇದ್ದರೆ ಮಂಕಿಪಾಕ್ಸ್ ಖಾಯಿಲೆ ಪರೀಕ್ಷೆಗೆ ಒಳಪಡಿಸಬಹುದು ಎಂದರು.
ಈಗಾಗಲೇ ಕೋವಿಡ್ 19 ತಜ್ಞರ ಸಮಿತಿ ಇದ್ದು, ಈ ತಜ್ಞರ ಸಮಿತಿಯು ಈ ಖಾಯಿಲೆ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಸಕ್ರಿಯವಾಗಿರಬೇಕು. ಈ ಖಾಯಿಲೆ ಕುರಿತು ಅರಿವು ಮತ್ತು ಮಾಹಿತಿ ನೀಡಬೇಕು. ಮುಖ್ಯವಾಗಿ ಮಕ್ಕಳ ವೈದ್ಯರು ಮತ್ತು ಇತರೆ ವೈದ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು. ಐಎಂಎ ಮೂಲಕ ಸಭೆ ನಡೆಸಿ ವೈದ್ಯರಲ್ಲಿ ಈ ರೋಗದ ಕುರಿತು ಸೆನ್ಸಿಟೈಸೇಷನ್ ಕಾರ್ಯ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಇಂತಹ ರೋಗಲಕ್ಷಣಗಳು ಕಂಡುಬರುವ ರೋಗಿಗಳನ್ನು ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸಿಕೊಡಬೇಕೆಂದು ತಿಳಿಸಿದರು.
ತಜ್ಞರ ಸಮಿತಿಯ ಡಾ.ಶ್ರೀಕಾಂತ್ ಹೆಗಡೆ, ಡಾ.ಧನಂಜಯ್ ಸರ್ಜಿ, ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಆರ್‍ಸಿಹೆಚ್‍ಓ ಡಾ.ನಾಗರಾಜ್‍ನಾಯ್ಕ, ಡಾ.ಸಿದ್ದನಗೌಡ, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಡಿಡಿಪಿಐ ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಸುರೇಶ್, ತಾಲ್ಲೂಕು ವೈದ್ಯಾಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.
(ಫೋಟೊ ಇದೆ)

Exit mobile version