Site icon TUNGATARANGA

ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ – ಗೂಂಡಾ ಪ್ರವೃತ್ತಿಗೆ ಶಾಸಕ ಡಿ.ಎಸ್. ಅರುಣ್ ಖಂಡನೆ

ಶಿವಮೊಗ್ಗ, ಜೂ.02:
ಶಾಲಾ ಮಕ್ಕಳ ಪಠ್ಯ ಮಸ್ತಕಗಳನ್ನು ಪರಿಷ್ಕರಣೆ ಮಾಡಿರುವ ಸಂಬಂದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇವರ ತಿಪಟೂರು ನಗರದ ಮನೆಗೆ ಎನ್.ಎಸ್.ಯು.ಐ ಕಾರ್ಯಕರ್ತರು ಮುತ್ತಿಗೆ ಹಾಕಿ ಬೆಂಕಿ ಹಚ್ಚುವ ಪ್ರಯತ್ನ ನಡೆಸಿರುವುದು ಸರಿಯಲ್ಲ. ಇಂತಹ ಗೂಂಡಾ ಪ್ರವೃತ್ತಿಯ ವರ್ತನೆಗಳನ್ನು ಹತ್ತಿಕ್ಕಬೇಕು ಎಂದು ಶಾಸಕ ಡಿ.ಎಸ್.ಅರುಣ್ ತೀವ್ರವಾಗಿ ಖಂಡಿಸಿದ್ದಾರೆ.


ಏಕಾಏಕಿಯಾಗಿ ಸಚಿವರ ಮನೆಯ ಮುಂದೆ ಗಲಾಟೆ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಸಚಿವ ಬಿ.ಸಿ ನಾಗೇಶ್‌ರವರು ನಾಡಿನ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಪಠ್ಯ ಪುಸ್ತಕ ರೂಪಿಸಲು ಶ್ರಮಿಸುತ್ತಿದ್ದು, ಹಾಗೂ ಶಿಕ್ಷಣ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ತಿಳಿಸಿದ್ದಾರೆ.
ನಾಡಿನ ಖ್ಯಾತ ಕವಿಗಳು ಮತ್ತು ಲೇಖಕರಿಗೆ ಅವಮಾನಕರ ರೀತಿಯಲ್ಲಿ ಮಾತನಾಡಿ ರುವುದು, ಅವರುಗಳು ರಚಿಸಿದ ಕವನಗಳು (ಕವಿತೆಗಳು) ಮತ್ತು ಗದ್ಯ ಪಾಠಗಳ ಬಗ್ಗೆ ಆಕ್ಷೇಪಾರ್ಹ ಮತ್ತು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ ಆಗುವುದಿಲ್ಲ. ಎಳೆಯ ವಯಸ್ಸಿನ ಶಾಲಾ ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.


ಪಠ್ಯಪುಸ್ತಕದಲ್ಲಿ ಏನಾದರೂ ಲೋಪ ದೋಷಗಳು ಅಥವಾ ವ್ಯತ್ಯಾಸಗಳು ಕಂಡು ಬಂದರೆ ಆ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯವರು, ಶಿಕ್ಷಣ ತಜ್ಞರು ಹಾಗೂ ನಾಡಿನ ಸಾಹಿತಿಗಳು ಹಾಗೂ ಲೇಖಕರು ಗಳು ಸರ್ಕಾರದ ಜೊತೆಗೆ ಕೈಜೋಡಿಸಿ ಒಂದೆಡೆ ಕುಳಿತು ಚರ್ಚಿಸಿ, ವಿಮರ್ಶೆ ನಡೆಸಿ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡು ಸರಿಪಡಿಸಬಹುದಾಗಿದೆ. ಈ ವಿಷಯವಾಗಿ ಕೆಲವು ಶಿಕ್ಷಣ ತಜ್ಞರು, ಕವಿಗಳು, ಲೇಖಕರುಗಳು ಮತ್ತು ಕೆಲವು ಜನಪ್ರತಿನಿಧಿಗಳು ಮಾಧ್ಯಮಗಳಿಗೆ ದಿನಕ್ಕೊಂದು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಾ, ಜನಸಾಮಾನ್ಯರನ್ನು ಗೊಂದಲಕ್ಕೆ ಈಡು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಡಿ.ಎಸ್.ಅರುಣ್ ಹೇಳಿದ್ದಾರೆ.

Exit mobile version