ಶಿವಮೊಗ್ಗ, ಆ.18:
ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದ್ದು, ಖಾಸಗಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯನ್ನು ಒದಗಿಸಲು ಮುಂದೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮನವಿ ಮಾಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಎಂಎ, ಕೆಪಿಎಂಇ ಸೇರಿದಂತೆ ವಿವಿಧ ವೈದ್ಯಕೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆಸಿದರು.
ಮೆಗ್ಗಾನ್ ಆಸ್ಪತ್ರೆಗೆ ಅಗತ್ಯವಿರುವ ಡಿ ಗ್ರೂಪ್ ಹಾಗೂ ನರ್ಸ್ಗಳ ನೇಮಕಾತಿಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಕಾಯ್ದೆ ಪ್ರಕಾರ ಎಲ್ಲಾ ಎಂಬಿಬಿಎಸ್ ಪದವೀಧರರು ಕನಿಷ್ಟ ಒಂದು ವರ್ಷ ಸರ್ಕಾರಿ ಸೇವೆ ಮಾಡಬೇಕಾಗಿದ್ದು, ಕೆಲವೇ ದಿನಗಳಲ್ಲಿ ಈ ವರ್ಷದ ಹೊಸ ಪದವೀಧರರ ಸೇವೆ ಲಭ್ಯವಾಗಲಿದೆ. ಇದರ ಜತೆಯಲ್ಲೇ ಖಾಸಗಿ ವೈದ್ಯರು ಕರೋನಾ ವಿರುದ್ಧ ಹೋರಾಟದಲ್ಲಿ ಕೈಜೋಡಿಸಬೇಕಾಗಿದೆ.
ಖಾಸಗಿ ವೈದ್ಯರ ಸೇವೆಯನ್ನು ಪಡೆಯುವ ಕುರಿತು ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಆಸಕ್ತ ವೈದ್ಯರ ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಗುವುದು. ಈಗಾಗಲೇ ಒಟ್ಟು 30 ಖಾಸಗಿ ವೈದ್ಯರು ಸೇವೆಯನ್ನು ಒದಗಿಸಲು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಈಗಾಗಲೇ ಸುಬ್ಬಯ್ಯ ಮೆಡಿಕಲ್ ಕಾಲೇಜು, ನಂಜಪ್ಪ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ 600ಬೆಡ್ಗಳು ಲಭ್ಯವಿದ್ದು, ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ ಹಾಗೂ ಇನ್ನಿತರ ಕೋವಿಡ್ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳುವ ಕುರಿತು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಸೇವೆ ಸಲ್ಲಿಸಲು ಮುಂದೆ ಬರುವ ವೈದ್ಯರಿಗೆ ಸೂಕ್ತ ಸಂಭಾವನೆಯನ್ನು ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ಕರೋನಾ ಪೀಡಿತರ ಪ್ರಮಾಣವನ್ನು ಗಮನಿಸಿದರೆ ಮುಂದಿನ ಒಂದೆರಡು ದಿನಗಳಲ್ಲಿ ಖಾಸಗಿ ವೈದ್ಯರ ಸೇವೆಯ ಅಗತ್ಯ ಬೀಳಬಹುದು. ಇದರೊಂದಿಗೆ ಆಯುರ್ವೇದಿಕ್ ವೈದ್ಯರ ಸೇವೆಯನ್ನು ಟ್ರಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ನಲ್ಲಿ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಐ.ಎಂ.ಎ, ಕೆಪಿಎಂe, ಫಿಜಿಷಿಯನ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.