ಶಿವಮೊಗ್ಗ,
ಹಿಂದೂ ಜಾಗೃತಿಗೆ ಆರ್.ಎಸ್.ಎಸ್. ಮುಖ್ಯ ಕಾರಣ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳವರೆಗೆ ಹಿಂದೂ ಜಾಗೃತಿ ಬಗ್ಗೆ ಯಾರೂ ಮಾತಾಡಿರಲಿಲ್ಲ. ಆದರೆ, ಈಗ ಜಾಗೃತಿ ಮೂಡುತ್ತಿದೆ. ಯಾವಾಗ ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾಯಿತೋ ಆಗಿನಿಂದ ಹಿಂದೂ ಜಾಗೃತಿ ಹೆಚ್ಚುತ್ತಾ ಹೋಗುತ್ತಿದೆ. ಈಗ ಕಾಶಿಯಲ್ಲಿರುವ ಮಸೀದಿಯಲ್ಲಿ ಶಿವಲಿಂಗ ಇತ್ತು ಎಂದು ಹೇಳಲು ಇಷ್ಟು ವರ್ಷಗಳು ಬೇಕಾಯಿತು. ದೇಶದಲ್ಲಿ ಸುಮಾರು36 ಸಾವಿರ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ. ಅಲ್ಲೆಲ್ಲ ಹಿಂದೂ ದೇವಾಲಯ ಗಳನ್ನು ಪುನರ್ ನಿರ್ಮಿಸುವುದೇ ಹಿಂದೂಗಳ ಸಂಕಲ್ಪವಾಗಿದೆ ಎಂದರು.
ಆರ್.ಎಸ್.ಎಸ್. ಕುರಿತಂತೆ ಟೀಕೆಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಕ್ತಿಶಾಲಿಗಳ ವಿರುದ್ಧ ಸೋತವರು ಹತಾಷರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ. ಭಾರತದಲ್ಲಿ ಜನಿಸಿ ಇಲ್ಲೇ ಬೆಳೆದು ಇಲ್ಲಿನ ಅನ್ನ, ನೀರು, ಗಾಳಿ ಸೇವಿಸುತ್ತಾ ಜೀವಿಸುತ್ತಿರುವ ಮುಸ್ಲಿಂ ಬಾಂಧವರು ವಂದೇ ಮಾತರಂ ಹೇಳಿದರೆ ಅದನ್ನು ಸ್ವಾಗತಿಸುತ್ತೇನೆ. ಮತ್ತು ಪ್ರೇರಣೆ ಎಂದು ಕರೆಯುತ್ತೇನೆ ಎಂದರು.