ಶಿವಮೊಗ್ಗ :
ಗುಣಮಟ್ಟದ ಬೋಧನೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವೈಜ್ಞಾನಿಕವಾಗಿ ಜಾರಿಗೊಳಿಸಬೇಕು. ಪದವಿ ಕಾಲೇಜುಗಳಲ್ಲಿನ ಶೇ.70 ರಷ್ಟು ಕಾರ್ಯಭಾರ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡುವಂತೆ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಾ. ಸೋಮಶೇಖರ್ ಹೆಚ್. ಶಿವಮೊಗ್ಗಿ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಎನ್‌ಇಪಿ ಜಾರಿಗೊಳಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಗೊಂದಲದ ನಡುವೆಯೇ ಎನ್‌ಇಪಿ ಜಾರಿ ಮಾಡಿದ್ದರೂ ಕೂಡ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಮೇಲೆ ಹೊರೆ ಹಾಕಲಾಗುತ್ತಿದೆ. ಯುಜಿಸಿ ನಿಯಮಾವಳಿ ಪ್ರಕಾರ ಗೌರವ ಧನ ನೀಡದಿದ್ದರೂ ಕೂಡ ಬೋಧನೆ ಹೊರತಾಗಿಯೂ ಬೇರೆ ಬೇರೆ ಕೆಲಸ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದರು.
ದಶಕಗಳಿಂದಲೂ ಅತ್ಯಲ್ಪ ಗೌರವಧನಕ್ಕೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಕೆಸಿಎಸ್ ನಿಯಮದ ಪ್ರಕಾರ ಸೇವೆಯಲ್ಲಿ ವಿಲೀನ ಮಾಡಲು ಅವಕಾಶ ಇದ್ದರೂ ಕುಂಟು ನೆಪ ಹೇಳಲಾಗುತ್ತಿದೆ. ಈಗಾಗಲೇ ಇಬ್ಬರು ಕಾರ್ಯನಿರ್ವಹಿಸುತ್ತಿದ್ದ ಕಾರ್ಯಭಾರವನ್ನು ಒಬ್ಬರಿಗೆ ಹಂಚಿಕೆ ಮಾಡಿ, ಅಲ್ಪ ಸ್ವಲ್ಪ ಹೆಚ್ಚಿಸಿರುವ ಗೌರವ ಧನವೇ ದೊಡ್ಡದೆಂದು ಬಿಂಬಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳ ಅಧೀನ ಕಾಲೇಜುಗಳಲ್ಲಿ ಪ್ರತೀ ಗಂಟೆಗೆ 1500 ರೂ. ವೇತನ ನೀಡುತ್ತಿದ್ದರೂ ಕೂಡ ಪದವಿ ಕಾಲೇಜುಗಳಲ್ಲಿ ಅದನ್ನು ಅನುಸರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರ್ಗಾವಣೆ, ನಿಯೋಜನೆ ಮೇಲೆ ಪ್ರಾಧ್ಯಾಪಕರು ಮೂಲ ಕಾಲೇಜುಗಳಿಗೆ ಮರಳಿರುವುದರಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರ ಕಾರ್ಯಭಾರ ಕಡಿಮೆಯಾಗಿದೆ. ಅಲ್ಪ ಗೌರವಧನಕ್ಕೆ ದೂರದ ಊರುಗಳಿಗೆ ಹಾಗೂ ಹೊರ ಜಿಲ್ಲೆಗಳಿಗೂ ಹೋಗಿ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಸಂತಕುಮಾರ್, ರೂಪಾ, ಸತೀಶ್, ಸರ್ವಜ್ಞ ಮೂರ್ತಿ ಮತ್ತಿತರರು ಇದ್ದರು.