ಶಿವಮೊಗ್ಗ, ಮೇ.28:
ದುರುದ್ದೇಶದಿಂದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ಆರೋಪಿಗಳಿಗೆ ನ್ಯಾಯಾಲಯವು ಏಳು ವರ್ಷ ಕಠಿಣ ಸಜೆ ವಿಧಿಸಿದೆ.
ವಿವರ: 17-06-2016 ರಂದು ಸಂಜೆ ಹರೀಶ, 24 ವರ್ಷ ಶರಾವತಿ ನಗರ ಶಿವಮೊಗ್ಗ ಈತನು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಚಾನಲ್ ಏರಿಯಾದಲ್ಲಿ ನಡೆದು ಹೋಗುತ್ತಿದ್ದಾಗ ಶಿವಮೊಗ್ಗ ನಗರದ ವಾಸಿಗಳಾದ ಮಂಜ, ಅನಿಲ ಮತ್ತು ಪ್ರಶಾಂತರವರು ಹಳೆಯ ದ್ವೇಶದ ಹಿನ್ನೆಲೆಯಲ್ಲಿ ಹರೀಶನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0180/2016 ಕಲಂ 307 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿಗಳಾದ ಅಭಯ್ ಪ್ರಕಾಶ್ ಸೋಮನಾಳ್, ಪಿ.ಎಸ್.ಐ ದೊಡ್ಡಪೇಟೆ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತರ ವಿರುದ್ಧ 20-07-2017 ರಂದು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀಮತಿ ರತ್ನಮ್ಮ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಶ್ರೀ ಮನು. ಕೆ.ಎಸ್ ಅವರು ನಿನ್ನೆ ಆರೋಪಿತರಾದ 1)ಮಂಜುನಾಥ @ ಕಟ್ಟಿಂಗ್ ಶಾಪ್ ಮಂಜ, 30 ವರ್ಷ, ಲಕ್ಷ್ಮಿ ಟಾಕೀಸ್ ಹತ್ತಿರ ಶಿವಮೊಗ್ಗ, 2)ಅನಿಲ್, 26 ವರ್ಷ, ಲಕ್ಷ್ಮಿ ಟಾಕೀಸ್ ಹತ್ತಿರ ಶಿವಮೊಗ್ಗ ಮತ್ತು 3)ಪ್ರಶಾಂತ @ ಕೊಡ್ಲಿ ಪ್ರಶಾಂತ, 26 ವರ್ಷ, ರಾಜೇಂದ್ರ ನಗರ ಶಿವಮೊಗ್ಗ ಇವರುಗಳ ವಿರುದ್ಧ ಕಲಂ 307 ಐಪಿಸಿ ಅಡಿಯಲ್ಲಿ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ 07 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 40,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 04 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ಮತ್ತು ಕಲಂ 324 ಐಪಿಸಿ ಅಡಿಯಲ್ಲಿ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ 02 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 10,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 01 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿದ್ದು, ಮೇಲ್ಕಂಡ ಶಿಕ್ಷೆಗಳು ಏಕಕಾಲದಲ್ಲಿ ಚಾಲ್ತಿಯಲ್ಲಿರುತ್ತವೆಂದು ಆದೇಶ ನೀಡಿರುತ್ತಾರೆ.