Site icon TUNGATARANGA

ಮಳೆ ಹಾನಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಯಮುನಾ ರಂಗೇಗೌಡ ಮನವಿ

ಶಿವಮೊಗ್ಗ,
ಶಿವಮೊಗ್ಗದಲ್ಲಿ ಪ್ರತಿ ವರ್ಷ ಸಂಭವಿಸುತ್ತಿರುವ ಮಳೆಯ ಹಾನಿಗೆ ಶಾಶ್ವತ ಪರಿಹಾರ ಕಲ್ಪಿಸಿ ಹಾಗೂ ಈ ವರ್ಷ ಸುರಿದ ಮಳೆಯಿಂದಾಗಿ ಸಂಭವಿಸಿದ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಶಿವಮೊಗ್ಗದಲ್ಲಿ ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಮಳೆಗಾಲದಲ್ಲಿ ನಾಗರೀಕರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ, ಪರಿಹಾರಕ್ಕೂ ಆಗ್ರಹಿಸುತ್ತಾದ್ದಾರೆ. ಮಳೆನೀರಿನಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಮನೆಗಳಿಗೆ ನುಗ್ಗಿರುವ ನೀರಿನಿಂದ ಹಾನಿಯಾದವರಿಗೆ ೨೫ ಸಾವಿರ ಹಾಗೂ ಸಂಪೂರ್ಣ ನೆಲಸಮವಾಗಿರುವ ಮನೆಗಳಿಗೆ 10 ಲಕ್ಷ ಪರಿಹಾರ ತಕ್ಷಣ ಘೋಷಣೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.


ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಅಲ್ಲದೆ, ಪ್ರಮುಖ ರಾಜಕಾಲುವೆಗಳಲ್ಲಿ ಹೂಳನ್ನು ತೆಗೆಯದಿರುವುದು, ತಡೆಗೋಡೆ ನಿರ್ಮಾಣ ಮಾಡದಿರುವುದು ಹಾಗೂ ಚರಂಡಿ ನಿರ್ಮಾಣದ ನಂತರ ಸ್ಲ್ಯಾಬ್‌ಗಳನ್ನು ಹಾಕುವಾಗ ಸಂಪೂರ್ಣವಾಗಿ ಚರಂಡಿಯಲ್ಲಿ ಹೂಳನ್ನು ತೆಗೆಯದಿರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ನಗರದಲ್ಲಿ ಕೆರೆಗಳ ಒತ್ತುವರಿ ಹಾಗೂ ಕರೆಗಳಿಂದ ನೀರು ಹರಿಯಲು ನಿರ್ಮಿಸಿರುವ ನಾಲಾಗಳನ್ನು ಲೇಔಟ್ ಅಭಿವೃದ್ಧಿ ನೆಪದಲ್ಲಿ ಸಂಪೂರ್ಣವಾಗಿ ಮುಚ್ಚಿರುವುದು, ಯುಜಿಡಿ ಕಾಮಗಾರಿಗೆ ಸಂಬಂಧ ಪಟ್ಟಂತೆ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಪೂರ್ಣ ಕಳಪೆಕಾಮಗಾರಿಯಿಂದ ಪೈಪ್ ಗಳು ಬ್ಲಾಕ್ ಆಗಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಅಕಾಲಿಕ ಮಳೆಯಿಂದ ಆಗಬಹುದಾದ ಹಾನಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತ್ತಾಯಿಸಿದ್ದಾರೆ.
ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಕಾಂಗ್ರೆಸ್ ಮುಖಂಡ ಕೆ. ರಂಗನಾಥ್ ಹಾಜರಿದ್ದರು.

Exit mobile version