Site icon TUNGATARANGA

ಬೇರೆ ಸರ್ಕಾರ ಇದ್ದಿದ್ದರೆ ಪಿಎಸ್‌ಐ ಅಕ್ರಮ ಬೆಳಕಿಗೆ ಬರುತ್ತಿರಲಿಲ್ಲ : ಬಿ.ವೈ.ಆರ್

ಸೊರಬ, ಮೇ.೧೦:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದು, ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಪಿಎಸ್‌ಐ ನೇಮಕಾತಿಯಲ್ಲಿನ ಆರೋಪಗಳು ಬೆಳಕಿಗೆ ಬರುತ್ತಿರಲಿಲ್ಲ. ಈ ವಿಷಯದಲ್ಲಿ ಸರ್ಕಾರ ದಿಟ್ಟ ನಿಲುವು ಕೈಗೊಂಡಿದ್ದು, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.


ಪಟ್ಟಣದ ಶ್ರೀ ಮುರುಘಾಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ೨.೫ ಕೋಟಿ ರೂ., ವೆಚ್ಚದ ಸಭಾ ಭವನದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿದೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳಿಗೆ ಸೂಕ್ತವಾದ ತನಿಖೆಯಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ದಿಟ್ಟ ನಿಲುವು ಕೈಗೊಳ್ಳಲಿದೆ ಎಂದರು.


ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಸಚಿವ ಸಂಪುಟ ವಿಸ್ತರಣೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಲಭಿಸಿದರೆ ಸಂತೋಷದ ವಿಷಯ. ಅಭಿವೃದ್ಧಿಯ ದೃಷ್ಟಿಯಿಂದಲೂ ಉತ್ತಮವಾಗಲಿದೆ. ಆಡಳಿತದ ಅವಧಿ ಕೇವಲ ಒಂದು ವರ್ಷ ಬಾಕಿ ಇದ್ದು, ಮುಂದಿನ ದಿನಗಳಲ್ಲಿಯೂ ಜನಹಿತವಾದ ಆಡಳಿತವನ್ನು ನೀಡಲಿದೆ ಎಂದರು.


ಸ್ವಪಕ್ಷಿಯರೇ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರದ ವಿರುದ್ಧವೇ ಹಣ ನೀಡಿದ್ದರೆ ಅಧಿಕಾರ ಹಿಡಿಯುತ್ತಿದ್ದೆ ಎಂದು ಆರೋಪಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಈ ಬಗ್ಗೆ ಪಕ್ಷದ
ಲ್ಲಿ ಹಿರಿಯರಿದ್ದಾರೆ. ಕೇಂದ್ರದ ಸಂಸದನಾಗಿ ಪ್ರತಿಕ್ರಿಯೆ ನೀಡಲಾರೆ ಎಂದ ಅವರು, ರಾಜ್ಯದಲ್ಲಿ ವಿಪಕ್ಷವಾಗಿರುವ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದೆ. ಸರ್ಕಾರದ ವಿರುದ್ಧ ಹೋರಾಟ ಗಳು, ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದೆ. ಸರ್ಕಾರ ವಿರುದ್ಧ ಆರೋಪಿಸಲು ಸಮರ್ಥ ವಾದ ಕಾರಣ ಇಲ್ಲದೇ ಇರುವುದರಿಂದ ಚುನಾವಣೆಯ ಹೊಸ್ತಿಲಲ್ಲಿ ಸಂಘಟನೆಯ ಉಳಿವಿಗಾಗಿ ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಲೇವಡಿ ಮಾಡಿದರು.


ಈ ಸಂದರ್ಭದಲ್ಲಿ ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಘಾಮಠದ ಶ್ರೀ. ಡಾ. ಮಹಾಂತ ಸ್ವಾಮೀಜಿ, ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಪ್ರಮುಖರಾದ ಚಿಕ್ಕಾವಲಿ ನಾಗರಾಜಗೌಡ, ನಿರಂಜನ ಕುಪ್ಪಗಡ್ಡೆ, ಗಜಾನನರಾವ್ ಉಳವಿ, ಅಶೋಕ್ ನಾಯ್ಕ್ ಅಂಡಿಗೆ, ಡಾ. ಎಚ್.ಇ. ಜ್ಞಾನೇಶ್, ಸಿ.ಪಿ. ಈರೇಶ್‌ಗೌಡ, ಯೋಗೇಶ್ ವಕೀಲ, ನಾಗರಾಜ ಗುತ್ತಿ, ವೀರೇಂದ್ರ ಪಾಟೀಲ್, ಸಂಜೀವ ಆಚಾರಿ, ಡಿ. ಶಿವಯೋಗಿ, ಬಸವರಾಜಗೌಡ ಮತ್ತಿತರರಿದ್ದರು.

Exit mobile version