Site icon TUNGATARANGA

ನ್ಯಾಯಬೆಲೆ ಅಂಗಡಿಗಳಿಂದ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ : ಡಾ|| ಆರ್.ಸೆಲ್ವಮಣಿ

ಶಿವಮೊಗ್ಗ, ಮೇ.06
ಜಿಲ್ಲೆಯ ೫೭೧ ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್ಲಾ ಪಡಿತರದಾರರಿಗೆ ಪ್ರಸಕ್ತ ಮಾಹೆಯಿಂದಲೇ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗ ಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ೭೫ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಘೋಷಿಸಿದಂತೆ ಈ ಬಲವರ್ಧಿತ ಅಕ್ಕಿಯನ್ನು ಶಿವಮೊಗ್ಗ ಸೇರಿದಂತೆ ರಾಜ್ಯದ ಆಯ್ದ ೧೪ಜಿಲ್ಲೆಗಳಲ್ಲಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿತರಿಸಲಾಗುತ್ತಿದೆ ಎಂದವರು ನುಡಿದರು.


ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಠಿಕಾಂಶವನ್ನು ಒದಗಿಸುವ ಹಾಗೂ ಮಹಿಳೆಯರು, ಮಕ್ಕಳು ಹಾಗೂ ಹಾಲುಣಿ ಸುವ ತಾಯಂದಿರಲ್ಲಿ ಅಪೌಷ್ಠಿಕತೆ ಮತ್ತು ಅವರ ಬೆಳವಣಿಯಲ್ಲಿ ಅಗತ್ಯ ಪೋಷಕಾಂ ಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಬಲವರ್ಧಿತ ಅಕ್ಕಿ ಸಹಕಾರಿಯಾಗಲಿದೆ. ಈಗಾಗಲೇ ಸರ್ಕಾರದ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಯೋಜನೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಇರುವ ಯೋಜ ನೆಗಳಲ್ಲಿ ಈ ಅಕ್ಕಿಯನ್ನು ಬಳಸಿಕೊಳ್ಳಲಾ ಗುತ್ತಿದೆ ಎಂದರು.


ಈ ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣಾಂಶ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ-೧೨, ಜಿಂಕ್, ವಿಟಮಿನ್-ಎ, ವಿಟಮಿನ್ ಬಿ-೨, ವಿಟಮಿನ್‌ಬಿ-೩, ವಿಟಮಿನ್ ಬಿ-೬ ಮತ್ತಿತರ ಪೋಷಕಾಂಶಗಳನ್ನು ಸೇರ್ಪಡೆ ಗೊಳಿಸಲಾಗಿದೆ. ಈ ಬಲವರ್ಧಿತ ಅಕ್ಕಿಯು ಸಾಮಾನ್ಯ ಅಕ್ಕಿಯಂತೆಯೇ ಕಾಣಲಿದೆ. ಬೇಯಿಸುವ ಅಕ್ಕಿಯೊಂದಿಗೆ ಇದು ಬೆರೆತು ಹೋಗಲಿದೆ. ಬೆರೆತ ಅಕ್ಕಿಯಲ್ಲಿ ಯಾವುದೆ ಅಂತರ ಕಂಡುಬರಲಾರದು. ಈ ಅಕ್ಕಿಯಲ್ಲಿ ಯಾವುದೇ ಅಡ್ಡವಾಸನೆ, ಬಣ್ಣ ಮತ್ತು ರುಚಿಯಲ್ಲಿ ವೆತ್ಯಾಸ ಕಂಡುಬರುವುದಿಲ್ಲ ಎಂದವರು ತಿಳಿಸಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ|| ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ೫೭೧ ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ ೩,೮೮,೯೦೭ ಬಿ.ಪಿ.ಎಲ್. ಪಡಿತರದಾರರು, ೧,೦೨,೧೪೨ ಎ.ಪಿ.ಎಲ್. ಪಡಿತರದಾರರು ಸೇರಿದಂತೆ ಒಟ್ಟು ೪,೯೧,೯೪೯ಪಡಿತರ ಚೀಟಿದಾರರು ಬಲವರ್ಧಿತ ಅಕ್ಕಿಯನ್ನು ಪಡೆಯಲಿದ್ದಾರೆ ಎಂದವರು ನುಡಿದರು.


ಕಳೆದ ಸಾಲಿನಲ್ಲಿ ಅಕ್ರಮವಾಗಿ ಪಡಿತರ ಚೀಟಿಯನ್ನು ಹೊಂದಿದ್ದ ೩೭೨೯ಜನರನ್ನು ಗುರುತಿಸಿ, ಅವರಿಂದ ಸುಮಾರು ೨೫ಲಕ್ಷ ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ೮,೨೭೨ ಗ್ರಾಹಕರನ್ನು ಗುರುತಿಸಿ, ೧೬ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ, ಸರ್ಕಾರಿ ನೌಕರರ ಹೆಚ್.ಆರ್.ಎಂ.ಎಸ್. ತಂತ್ರಾಂಶ ಮತ್ತು ಕಂದಾಯ ಇಲಾಖೆಗಳು ಹೊಂದಿರುವ ತಂತ್ರಾಂಶದ ಆಧಾರದ ಮೇಲೆ ಅಕ್ರಮ ಪಡಿತರ ಚೀಟಿದಾರರನ್ನು ಗುರುತಿಸಿ, ಅಂತಹವರ ಪಡಿತರ ಚೀಟಿಗಳನ್ನು ರದ್ದುಗೊ ಳಿಸಲಾಗುತ್ತಿದೆ ಅಲ್ಲದೆ ದಂಡ ವಸೂಲಿ ಮಾಡಲಾಗುತ್ತಿದೆ.

ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ|| ಮಂಜುನಾಥ್, ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದ ವಿಭಾಗೀಯ ವ್ಯವಸ್ಥಾಪಕ ಭಗವಾನ್‌ಸಿಂಗ್, ಗುಣಮಟ್ಟ ನಿಯಂತ್ರಣಾಧಿಕಾರಿ ಶಿವಕುಮಾರ್ ಮತ್ತಿತರರಿದ್ದರು.

Exit mobile version