ಬೆಂಗಳೂರು,ಮೇ೫-ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪುನಃ ಅನಾವರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೆ.ಸಿ.ರೆಡ್ಡಿ ಅವರ ೧೨೦ನೇ ಜನ್ಮದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಅವರು ಮಾತನಾಡಿದರು. ಈಗಾಗಲೇ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸಿದ್ದಗೊಂಡಿದೆ. ಇದನ್ನು ಅನಾವರಣಗೊಳಿಸುವುದಷ್ಟೇ ಬಾಕಿ ಇದೆ. ಆದಷ್ಟು ಶೀಘ್ರ ವಿಧಾನಸೌಧಕ್ಕೆ ತಂದು ಅನಾವರಣ ಮಾಡಲು ಇಂದೇ ಕಾರ್ಯಾದೇಶ ಮಾಡುವುದಾಗಿ ತಿಳಿಸಿದರು.
ಈ ಹಿಂದೆಯೇ ಅವರ ಪ್ರತಿಮೆ ಇಲ್ಲಿ ಅನಾವರಣಗೊಳ್ಳಬೇಕಿತ್ತು. ಬೇರೆ ಬೇರೆ ಕಾರಣಗಳಿಂದ ಇದು ತಡವಾಗಿದೆ. ಇನ್ನು ವಿಳಂಬ ಮಾಡದೆ ಅದಷ್ಟು ಶೀಘ್ರ ಈ ಕಾರ್ಯ ಮುಗಿಯಲಿದೆ ಎಂದರು. ಆಧುನಿಕ ಕರ್ನಾಟಕದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದವರಲ್ಲಿ ಕೆ.ಸಿ.ರೆಡ್ಡಿ ಪ್ರಮುಖರು. ಇಂದು ಐಟಿಬಿಟಿ, ಸಾರ್ವಜನಿಕ ಉದ್ಯಮಗಳು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬೆಳೆದಿರುವುದರಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಶಂಸಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಉದ್ಯಮಗಳನ್ನು ಸ್ಥಾಪಿಸಲು ಕೆ.ಸಿ.ರೆಡ್ಡಿ ಅವರು ಕಾರಣೀಭೂತರಾಗಿದ್ದಾರೆ. ಅವರ ದೂರದೃಷ್ಟಿಯ ಆಡಳಿತದಿಂದಾಗಿ ಕರ್ನಾಟಕ ಇಂದು ಹಲವು ಕ್ಷೇತ್ರಗಳಲ್ಲಿ ಮಾದರಿಯಾಗಿದೆ ಎಂದು ಹೊಗಳಿದರು.
ಕೆ.ಸಿ.ರೆಡ್ಡಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ನಮ್ಮ ಸರ್ಕಾರ ಅವರ ಆಡಳಿತದ ದೂರದೃಷ್ಟಿಯನ್ನು ಅಳವಡಿಸಿಕೊಂಡಿದೆ ಎಂದರು. ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಾನು ಮೂರು ಡಿಸಿಎಂ ಸೃಷ್ಟಿಯಾಗುತ್ತದೆ.
ಇಂತಹ ದಿನವೇ ನಡೆಯಲಿದೆ ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಗೃಹ ಸಚಿವರಾದ ಅಮಿತ್ ಷಾ ಅವರು ದೆಹಲಿಗೆ ಹೋದ ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಯಾವಾಗ ತಿಳಿಸುತ್ತಾರೋ ಗೊತ್ತಿಲ್ಲ. ಒಂದು ವೇಳೆ ನನ್ನನ್ನು ದೆಹಲಿಗೆ ಬರುವಂತೆ ಅವರು ಕರೆದರೆ ಹೋಗಲು ಸಿದ್ದನಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.