Site icon TUNGATARANGA

ಕೊರೊನಾಸುರನಿಗೆ ಮೈನಾಸು ಬಲಿ!

ಶಿವಮೊಗ್ಗ,ಆ.14:
ವಿಧಿಯಾಟದ ಮುಂದೆ ಎಲ್ಲವೂ ಶೂನ್ಯ. ಪ್ರತಿಭಾನ್ವಿತ ಕಲಾವಿದ, ಬಣ್ಣದ ಲೋಕದಲ್ಲೇ ಬದುಕು ಕಟ್ಟಿಕೊಂಡಿದ್ದ ಮೈನಾಸು ನಮ್ಮನ್ನು ಬಿಟ್ಟು ಅಗಲಿದ್ದಾರೆ.
ಕೋವಿಡ್ 19 ಕೊರೋನಾದ ಅಟ್ಟಹಾಸಕ್ಕೆ ಶಿವಮೊಗ್ಗದ ರಂಗಭೂಮಿ ಕಲಾವಿದ, ಪತ್ರಕರ್ತ, ಚಿತ್ರನಟ, ಒಂದೊಳ್ಳೆ ಸಂಘಟನಾ ಚತುರ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಮೈ.ನಾ.ಸುಬ್ರಹ್ಮಣ್ಯ ಬಲಿಯಾಗಿದ್ದಾರೆ.
ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಸಂಸ್ಥಾಪಕರಾಗಿದ್ದ ಮೈನಾಸುಗೆ ಕಳೆದ ಮೂರು ದಿನಗಳ ಹಿಂದೆ ಕೊರೋನ ಪಾಸಿಟಿವ್ ವರದಿ ಬಂದಿತ್ತು. ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದ ಇವರು ಇಂದು ಸಾವನ್ನಪ್ಪಿದ್ದಾರೆ.
ಮಸಣದ ಮಕ್ಕಳು ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ, ಇತ್ತೀಚಿನ ಸೀತಾ ಧಾರವಾಹಿ, ಬಯಲು ಸೀಮೆ ಕಟ್ಟೆಪುರಾಣ, ಕಡಿದಾಳ್ ಶಾಮಣ್ಣ, ಸುಣ್ಣ ಹಚ್ಚಿದ ಸಮಾದಿಗಳು, ಶಾಲಾ ಭಂಜಿಕೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದ ಕಲಾವಿದರಿವರು. ಹಾಸ್ಯಕಲಾವಿದ ಎಂದೇ ಹೆಸರಾಗಿದ್ದ ರಂಗ ಭೂಮಿಕಲಾವಿದರ ಒಕ್ಕೂಟದ ಸಹಕಾರ್ಯದರ್ಶಿ, ನಿರ್ದೇಶಕರಾಗಿದ್ದರು.
ರಂಗಭೂಮಿ ತಂಡಗಳಾದ ನಮ್ ಟೀಂ, ಅಭಿನಯ, ಹೊಂಗಿರಣ, ಕಲಾಜ್ಯೋತಿ, ಸೂತ್ರದಾರ ಸೇರಿದಂತೆ ಹಲವು ತಂಡದಲ್ಲಿ ಅಭಿನಯಿಸಿದ್ದರು.
ಒಂದು ತಮಿಳು ಚಲನಚಿತ್ರದಲ್ಲಿಯೂ ಸಹ ನಟಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಹಿಂದೆ ನಗರದ ಕುವೆಂಪುರಂಗ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮೊದಲು ಥಿಯೇಟರ್ ಫರ್ಮಾನೆನ್ಸು ತಂದ ಕೀರ್ತಿ ಮೈನಾಸುರವರದ್ದಾಗಿತ್ತು.
ಇವರ ಅಗಲಿಕೆಯಿಂದ ರಂಗಭೂಮಿ ಬರಿದಾಗಿದೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ತಾರಾ ಮೈನಾಸು ಮತ್ತು ಚೈತ್ರ ಮೈನಾಸು ಅವರಿಬ್ಬರೂ ಸಹ ಚಲನಚಿತ್ರ ನಟಿಯರಾಗಿದ್ದಾರೆ.
ಮೈನಾಸು ನಿಧನಕ್ಕೆ ರಂಗಭೂಮಿ ಕಲಾವಿದರು ಹಾಗೂ ವಿವಿಧ ಗಣ್ಯರು ಕಂಬನಿ ಮಿಡಿದಿದ್ದಾರೆ.

Exit mobile version