Site icon TUNGATARANGA

ಆರಗ ರಾಜೀನಾಮೆ ನೀಡಲಿ: ಹೆಚ್.ಎಸ್.ಸುಂದರೇಶ್

ಶಿವಮೊಗ್ಗ, ಏ.೨೯:
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕಿಂಗ್ ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪಿಎಸ್‌ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಬಯಲಾಗಿದೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರು ಪ್ರಮುಖ ಆರೋಪಿಯಾಗಿದ್ದು, ಅವರನ್ನು ಬಂಧಿಸಿ ರುವುದು ದೊಡ್ಡ ಸಾಧನೆಯಲ್ಲ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಹೇಳಿಕೆಯ ಹಿಂದೆ ಭಾರಿ ಕುತಂತ್ರವಿದ್ದು, ಅವರನ್ನು ರಕ್ಷಿಸುವ ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಇಡೀ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸಿ ಮರುಪರೀಕ್ಷೆಗೆ ಸರ್ಕಾರ ಆದೇಶ ಮಾಡಿರುವುದು ಸರಿಯಲ್ಲ. ಮರು ಪರೀಕ್ಷೆ ನೆಪದಲ್ಲಿ ಆಪಾದಿತರನ್ನು ಕೂಡ ರಕ್ಷಿಸಲು ಸರ್ಕಾರ ಮುಂದಾಗಿದೆ.

ಪಿಎಸ್‌ಐ ಆಯ್ಕೆಗೆ ಪರೀಕ್ಷೆ ಬರೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾ ಗಿದ್ದು, ಮರು ಪರೀಕ್ಷೆ ಮಾಡುವುದರಿಂದ ಯಾವ ಅಕ್ರಮ ಮಾಡದೇ ಆಯ್ಕೆಯಾದ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅನೇಕ ಆಕಾಂಕ್ಷಿಗಳು ಅತ್ಯಂತ ಬಡತನದಿಂದ ಬಂದು, ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಈಗ ಮರು ಪರೀಕ್ಷೆ ಮಾಡುವುದರಿಂದ ಅವರಿಗೆ ಸಂಕಷ್ಟವಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆಗೂ ಯೋಚಿಸುತ್ತಿದ್ದಾರೆ. ಆದ್ದರಿಂದ ಪಿಎಸ್‌ಐ ಪರೀಕ್ಷೆಯ ತಾತ್ಕಾಲಿಕ ಪಟ್ಟಿಯನ್ನು ರದ್ದಪಡಿಸಿದ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದಿದ್ದಾರೆ.

Exit mobile version