Site icon TUNGATARANGA

ಪಿಎಸ್‌ಐ ನೇಮಕಾತಿ ಪ್ರವೇಶ ಪರೀಕ್ಷೆ ರದ್ದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರೇನು ತಪ್ಪು ಮಾಡಿದ್ರು…?


ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಏ.30:
ಪಿಎಸ್‌ಐ ಹುದ್ದೆ ನೇಮಕಾತಿಗೆ ಕಳೆದ ವರ್ಷ ಆಗಸ್ಟ್ ನಲ್ಲಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದು ಸಿಐಡಿ ತನಿಖೆ ನಡೆಸಿ ಪ್ರಮುಖ ಆರೋಪಿಗಳನ್ನು ಇಂದು ಶುಕ್ರವಾರ ಬಂಧಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
೫೪೫ ಪಿಎಸ್‌ಐ ಹುದ್ದೆಗಳಿಗೆ ಕಳೆದ ವರ್ಷ ನಡೆಸಲಾದ ಪರೀಕ್ಷೆಯನ್ನು ಸಂಪೂರ್ಣ ರದ್ದುಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಹಿಂದೆ ನಡೆದಿದ್ದ ಪಿಎಸ್‌ಐ ಪರೀಕ್ಷೆ ಫಲಿತಾಂಶವನ್ನು ರದ್ದು ಮಾಡಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.


ಆರೋಪಿಗಳಿಗಿಲ್ಲ ಮರು ಪರೀಕ್ಷೆ: ಆದರೆ ಕಳೆದ ಬಾರಿ ಪರೀಕ್ಷೆ ವೇಳೆ ಅಕ್ರಮ ನಡೆಸಿದ್ದ ಆರೋಪಿಗಳಿಗೆ ಮರು ಪರೀಕ್ಷೆಯಿಲ್ಲ. ಅವರು ಮರು ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ೨೦೨೧ರ ಆಗಸ್ಟ್ ೩ರಂದು ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. ೨೦೨೨ರ ಜನವರಿ ೧೯ರಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ ಮಾಡಲಾಗಿತ್ತು, ನೇಮಕಾತಿಯಲ್ಲಿ ಗೋಲ್ ಮಾಲ್ ಆಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದೂರು ನೀಡಿದ್ದರು.

Exit mobile version