Site icon TUNGATARANGA

ಚೆಂದದ ಮಳೆ ಬಿದ್ದರೆ ಸ್ಮಾರ್ಟ್‌ಸಿಟಿ ಬಣ್ಣ ಬಯಲು.! ಪಾಲಿಕೆ-ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳೇ ಕಛೇರಿ ಬಿಟ್ಟು ಬೀದಿಗೆ ಬನ್ನಿ

ನೆಹರೂ ರಸ್ತೆ ಕನ್ಸರ್‌ವೆನ್ಸಿ ಕಕ್ಕದ ಕೋಣೆಯಾಗಿರುವುದು


ಎಸ್.ಕೆ.ಗಜೇಂದ್ರಸ್ವಾಮಿ
ಶಿವಮೊಗ್ಗ ನಗರದ ಅದ್ಯಾವ ಸೀಮೆ ಅಭಿವೃದ್ಧಿಯ ಸ್ಮಾರ್ಟ್‌ಸಿಟಿ ಹೆಸರಿನ ಕೋಟ್ಯಾಂತರ ರೂಪಾಯಿ ಹಣ ಬಂದಿದೆಯೋ ಗೊತ್ತಿಲ್ಲ. ಆದರಿಂದ ಅನುಕೂಲತೆಗಿಂತ ಅನಾನುಕೂಲತೆಗಳೇ ಹಾಗೂ ಭಾರಿ ಭ್ರಷ್ಟಾಚಾರ ನಡೆದಿರುವ ಆರೋಪ ಸಾರ್ವಜನಿಕವಾಗಿ ಕೇಳಿಬಂದಿದೆ.
ಶಿವಮೊಗ್ಗ ನಗರದ ಬಹಳಷ್ಟು ಕಡೆ ವ್ಯವಸ್ಥೆಗಳಿದ್ದ ಸ್ಥಳದಲ್ಲಿಯೇ ಮತ್ತೆ ಇದೇ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆದಿದೆ. ಬೆರಳಣಿಕೆಯಷ್ಟು ಕಾಮಗಾರಿಗಳು ತೃಪ್ತಿತಂದಿದ್ದರೆ ಅದರಲ್ಲೂ ಅಲ್ಲಿಯೂ ಸಹ ಬಹಳಷ್ಟು ಸಂದಿಮೂಲೆಗಳು ಹಾಳಾಗಿ ಹೋಗಿವೆ. ಬಿದ್ದ ಒಂದೆರಡು ಸಣ್ಣ ಮಳೆಗೆ ಇಡೀ ಸ್ಮಾರ್ಟ್‌ಸಿಟಿ ಕಾಮಗಾರಿ ತನ್ನ ನಿಜ ಸ್ವರೂಪವನ್ನು ತೋರಿಸುತ್ತಿದೆ.

ಮಳೆಗಾಲ ಆರಂಭಗೊಳ್ಳುತ್ತಿದೆ. ಚೆಂದದ ನಾಲ್ಕು ಮಳೆ ಬಂದರೆ ಸಾಕು ಇಡೀ ಸ್ಮಾಟ್‌ಸಿಟಿಯ ಅವಾಂತರ ನಾಚಿಕೆ ತರಿಸುವಂತೆ ಕಾಣಿಸಿಕೊಳ್ಳುತ್ತದೆ ಎಂಬುವುದರಲ್ಲಿ ಅನುಮಾನವೇ ಇಲ್ಲ.
ಫುಟ್‌ಪಾತ್ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿಸುವ ಮೂಲಕ ಒಂದೆಡೆ ಬೀದಿಬದಿ ವ್ಯಾಪಾರಿಗಳಿಗೆ ಸಂಜೆಯ ಹೊತ್ತಿಗೆ ತಿನಿಸುಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿರುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಜೋಡಿಸಿರುವ ಟೈಲ್ಸ್‌ಗಳು ಈಗಾಗಲೇ ಮೇಲೆ ಕೆಳಗೆ ಎಂದು ಆಟವಾಡುತ್ತಿವೆ. ಇವು ಈ ವರ್ಷದ ಮಳೆಗಾಲ ತಮ್ಮ ಅಂತಿಮ ವರ್ಷವನ್ನು ಹಾಡುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
ಘಟನೆಗಳ ವಿವರಗಳೊಂದಿಗೆ ಚಿತ್ರಗಳನ್ನು ನೀಡುವ ಚಿಕ್ಕಪ್ರಯತ್ನವನ್ನು ನಿಮ್ಮ ತುಂಗಾ ತರಂಗ ಮಾಡುತ್ತಿದೆ. ಇಡೀ ಸ್ಮಾರ್ಟ್‌ಸಿಟಯ ನೂರಾರು ಲೋಪಗಳಲ್ಲಿ ಕೆಲವನ್ನು ಆಯ್ದು ಸಾರ್ವಜನಿಕವಾಗಿ ಈ ಮಾಹಿತಿಯನ್ನು ನೀಡುವ ಪ್ರಯತ್ನ ನಮ್ಮದಾಗಿದೆ.

ಜೈಲ್‌ರಸ್ತೆ ಡ್ರೈನೇಜ್ ಈವರ್ಷ ಮುಗಿಯುತ್ತಾ?

ಒಟ್ಟಾರೆ ಈಗಾಲಾದರೂ ಕನಿಷ್ಠ ಪಕ್ಷ ಸ್ಮಾರ್ಟ್‌ಸಿಟಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಅದರಲ್ಲೂ ಮಹಾನ್ ಇಂಜಿನಿಯರ್ ಮಹಾಶಯರು ಕೂಡಲೇ ತುರ್ತು ಕ್ರಮಕೈಗೊಂಡು ಹಾಳಾಗಿರುವ ವ್ಯವಸ್ಥೆಯನ್ನು ಸರಿಪಡಿಸುವರೇ ಎಂದು ಕಾದುನೋಡಬೇಕಿದೆ.


ಕಾಮಗಾರಿಗಳ ವಿವಿರ
ಶಿವಮೊಗ್ಗ ಸ್ಮಾರ್ಟ್‌ಸಿಟಿಯಲ್ಲಿ ಕೈಗೊಬ್ಬರಂತೆ ಇಂಜಿನಿಯರ್‌ಗಳು ಸಿಗುತ್ತಾರೆ. ಜ್ಯೂನಿಯರ್ ಇಂಜಿನಿಯರ್‌ಗಳಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಮಾಡಿದ್ದಾರೆ. ಆದರೂ ಕಾಮಗಾರಿಗಳು ಸಮರ್ಪಕವಾಗಿ ನಡೆಯದ ಕಾರಣವೇನೋ ಗೊತ್ತಿಲ್ಲ.
ಮೊನ್ನೆಯಷ್ಟೆ ಸಿದ್ದವಾದ ಶಿವಮೊಗ್ಗ ೧೦೦ಅಡಿ ರಸ್ತೆಯ ಪೊಲೀಸ್‌ಚೌಕಿವರೆಗಿನ ರಸ್ತೆ ಕಾಮಗಾರಿ ಹಾಗೂ ಟೈಲ್ಸ್‌ಗಳ ಅಳವಡಿಕೆ ಒಂದಿಷ್ಟು ಉತ್ತಮವೆಂಬಂತೆ ನಡೆದಿತ್ತು. ಆದರೆ ನಿನ್ನೆಯಿಂದ ಇದೇ ಟೈಲ್ಸ್‌ಗಳನ್ನು ಕಿತ್ತು ಪೈಪ್‌ಗಳನ್ನು ಹಾಕಲು ಆಳವಾದ ಚರಂಡಿ ತೆಗೆಯುವ ಕಾರ್ಯ ನಡೆಯುತ್ತಿದೆ. ಮೊದಲೇ ಈ ಕಾರ್ಯ ಮಾಡಬಹುತ್ತಿಲ್ಲವೇ.? ಚರಂಡಿ ಆದ ನಂತರ ಟೈಲ್ಸ್‌ಗಳನ್ನು ಅವರು ಕ್ರಮಬದ್ಧವಾಗಿ ಜೋಡಿಸುತ್ತಾರಾ?


ಶಿವಮೊಗ್ಗ ಲಕ್ಷ್ಮೀ ಚಿತ್ರ ಮಂದಿರದ ಬಳಿಯ ಸರ್ಕಲ್‌ನಲ್ಲಿ ಫ್ರೀಡಂ ಪಾರ್ಕ್ ಮುಂದಿನ ಕಾಮಗಾರಿ ಆರು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವುದೇಕೆ? ಇನ್ನೂ ಜೈಲ್‌ರಸ್ತೆಯ ಚಾನೆಲ್ ಪಕ್ಕದಲ್ಲಿರುವ ಡ್ರೈನೇಜ್ ಕಾಮಗಾರಿ ನಿಂತಿರುವುದಾದರೂ ಏಕೆ. ಇಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಮಾಡುವುದು ಅಷ್ಟೆಯಂತೆ ಶಿವಮೊಗ್ಗ ನಗರಪಾಲಿಕೆ ಒತ್ತುವರಿ ತೆರವುಗೊಳಿಸಬೇಕು. ಪಾಲಿಕೆಯ ಇಂಜಿನಿಯರ್ ಮಹಾಶಯರು ಈ ವಿಚಾರದಲ್ಲಿ ಜನಪ್ರತಿನಿಧಿಯೊಬ್ಬರ ಚೇಲಾಗಿರಿ ಮಾಡುತ್ತಿದ್ದಾರಾ? ರಸ್ತೆಯಲ್ಲಿರುವ ಒತ್ತುವರಿ ಜಾಗ ತೆರವುಗೊಳಿಸಲು ಆಗಿರುವ ಸಮಸ್ಯೆಯಾದರೂ ಏನು?
ಶಿವಮೊಗ್ಗ ಪ್ರವಾಸಿ ಮಂದಿರ ಪಕ್ಕದ ಫುಟ್‌ಪಾತ್‌ನಲ್ಲಿ ಸುಮಾರು ೬ರಿಂದ ೭ಅಡಿ ಆಳದ ೪/೪ ತೆರೆದ ತೊಟ್ಟಿಯನ್ನು ಕಟ್ಟಿರುವುದಾದರೂ ಏಕೆ? ಅದೃಷ್ಟವಶಾತ್ ಇಲ್ಲಿಯವರೆಗೆ ಯಾರು ಬಿದ್ದಿಲ್ಲ. ಬಿದ್ದರೆ ಅಲ್ಲಿ ಸ್ವರ್ಗಕಾಣುವುದು ಖಚಿತ. ವಿದ್ಯುತ್ ಕಂಬದ ಟ್ರಾನ್ಸ್‌ಫಾರಂ ಪೆಟ್ಟಿಗೆ ಪಕ್ಕದಲ್ಲೇ ಇರುವ ಈ ಗುಂಡಿ ಯಾರಾ, ಯಾವ ಉದ್ದೇಶಕ್ಕೆ.
ಶಿವಮೊಗ್ಗ ನೆಹರೂ ರಸ್ತೆಯ ಅದರಲ್ಲೂ ಅಲ್ಲಿನ ಕನ್ಸರ್‌ವೆನ್ಸಿಗಳ ಕಥೆ ಎಲ್ಲಿಗೆ ಬಂತು. ಅಲ್ಲಿ ಕಟ್ಟಿರುವ ಶೌಚಾಲಯಗಳನ್ನು ಯಾರಿಗೆ ಮಾರಬೇಕು ಎಂದಿದ್ದೀರಿ ನೀವು ಹಾಕಿರುವ ಕನ್ಸರ್‌ವೆನ್ಸಿಗಳ ಟೈಲ್ಸ್‌ಗಳು ಮಲಮೂತ್ರ ವಿಸರ್ಜನೆಗೆ ಸೂಕ್ತಜಾಗವಾಯಿತಾ. ಕನಿಷ್ಟ ಯಾವಾತ್ತಾದರೂ ಅಲ್ಲಿಗೆ ಹೋಗಿ ನೋಡಿದ್ದೀರಾ. ನಿಮ್ಮ ಟೈಲ್ಸ್‌ಗಳು ನರ್ತಿಸುತ್ತಿವೆ. ಕೊಳಕು ವಾಸನೆ ಕಿತ್ತುಬರುತ್ತಿದೆ.
ಜೈಲ್‌ರಸ್ತೆಯ ರಸ್ತೆ ಮನೆ ಹಾಳಾಗಿ ಹೋಗಲಿ ಟೈಲ್ಸ್‌ಮಗ್ಗುಲ ಡ್ರೈನೇಜ್ ಮುಂದೆ ಹಾಕಿರುವ ಸ್ಲಾಬ್ ಎತ್ತರವಾಗಿದೆ. ಅಂಗಡಿಗೆ ಹೋಗುವವನು ಹೇಗೆ ತಾನೆ ಹೋಗಬೇಕು ಚಿಕ್ಕ ಕಾಮನ್‌ಸೆನ್ಸ್ ಇಲ್ಲದೇ ಕೆಲಸ ಮಾಡಿದ್ದೀರಾ.?
ನೀವು ಮಾಡಿರುವ ೧೦೦ ಅಡಿ ರಸ್ತೆಯ ತರಕಾರಿ ಮಾರುಕಟ್ಟೆ ಬಳಿ ಬಿದ್ದ ಮಳೆಯಲ್ಲಿ ಒಂದು ಹನಿ ಸಹ ಚರಂಡಿ ಒಳಗೆ ಹೋಗಿಲ್ಲ. ರಸ್ತೆಯ ಮೇಲೆ ನೀರು ತುಂಬಿ ನಿಂತಿದೆ. ನಿಮ್ಮ ಕಾಮಗಾರಿಯನ್ನು ನೀವೇ ಮಳೆ ಬಂದಾಗ ಹೋಗಿ ನಿಂತು ನೋಡಿ.
ಈ ಸ್ಥಳಗಳ ಜೊತೆಗೆ ಇಂತಹ ನೂರಾರು ಕಳಪೆ ಕಾಮಗಾರಿಗಳ ನಿದರ್ಶನಗಳಿವೆ. ಕೂಡಲೇ ಅತ್ತಹೋಗಿ ನೋಡಿಬನ್ನಿ.

Exit mobile version