ಶಿವಮೊಗ್ಗ: ಮತೀಯ ಗಲಬೆ ಹಬ್ಬಿಸುತ್ತಿರುವ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಇಂದು ಬೆಳಿಗ್ಗೆ ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆಹಳ್ಳಿ ಗಲಭೆಯ ಹಿಂದೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಇಂತಹ ರಕ್ಕಸ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟ ಈ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸಬೇಕು. ಈ ಘಟನೆಯ ಹಿಂದೆ ಷಡ್ಯಂತ್ರವೇ ಅಡಗಿದ್ದು, ಇದು ವ್ಯವಸ್ಥಿತ ಸಂಚೇ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಘಟನೆಯಲ್ಲಿ ಮನೆಗಳಿಗೆ ಕಲ್ಲು ತೂರಲಾಗಿದೆ. ಪೊಲೀಸ್ ಮತ್ತು ಮಾಧ್ಯಮ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಲಾಗಿದೆ. ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದೊಂದು ಪೈಶಾಚಿಕ ಕೃತ್ಯವಾಗಿದೆ. ಮಂಗಳೂರಿನಲ್ಲಿ ನಡೆದ ಗಲಭೆಯ ಮುಂದುವರೆದ ಭಾಗವೇ ಇದಾಗಿದೆ. ಜನರು ಭಯಭೀತರಾಗಿದ್ದಾರೆ. ಇದೊಂದು ರಾಷ್ಟ್ರವಿದ್ರೋಹಿ ಕೃತ್ಯವಾಗಿದೆ. ಪಾಕಿಸ್ತಾನದ ಐಎಸ್‍ಐ ಸಂಘಟನೆಯ ಕೈವಾಡ ಶಂಕೆಯೂ ಇದೆ. ಈ ಘಟನೆಯನ್ನು ರಾಷ್ಟ್ರೀಯ ತನಿಖಾದಳದ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಎಸ್.ಆರ್.ನಟರಾಜ್, ನಾರಾಯಣ ಜಿ.ವರ್ಣೇಕರ, ಸತೀಶ್ ಮುಂಚೇಮನೆ, ಎಸ್.ಆರ್.ಸುಧಾಕರ್, ರಾಜೇಶಗೌಡ, ನಾಗರತ್ನ, ಜಯಲಕ್ಷ್ಮಿ, ಕಾವ್ಯ, ಮಮತಾ ಪ್ರಭಾಕರ್, ಸರೋಜ, ಲಕ್ಷ್ಮಿ, ಗೀತಾಲಕ್ಷ್ಮಿ, ಸುನೀತ, ಮುಂತಾದವರು ಪಾಲ್ಗೊಂಡಿದ್ದರು.