ಸಾಗರ, ಏ.೨೨:
ಕೊರೋನಾ ಸಂಕಷ್ಟದ ನಡುವೆಯೂ ಹಸಿದವರು ಸಂಕಷ್ಟಪಡದಂತೆ ಎಲ್ಲರಿಗೂ ಆಹಾರ ನೀಡಿದ ಹೆಗ್ಗಳಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ್ದಾಗಿದೆ ಎಂದು ಶಾಸಕ ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ನಗರಸಭೆ ವತಿಯಿಂದ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಫಲಾನುಭವಿಗಳಿಗೆ ವಸತಿ ಕಾಮಗಾರಿ ಕಾರ‍್ಯಾದೇಶ ಮತ್ತು ಶೇ. ೫ ಯೋಜನೆಯಡಿ ಬುದ್ದಿಮಾಂದ್ಯ ಮಕ್ಕಳ ಪೋಷಕರಿಗೆ ಭದ್ರತಾ ಠೇವಣಿ ಬಾಂಡ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ನರೇಂದ್ರ ಮೋದಿಯವರು ದೇಶದ ಸಮಗ್ರತೆಗಾಗಿ ಅರ್ಹನಿಶಿ ದುಡಿಯುತ್ತಿದ್ದರೂ ಅವರು ಏನು ಮಾಡಿದ್ದಾರೆ ಎಂದು ಕೆಲವರು ಕೇಳುತ್ತಿದ್ದಾರೆ. ದೇಶದಲ್ಲಿ ಹಿಂದೂ ಮುಸ್ಲೀಂ ಇಬ್ಬರೂ ಸಹೋದರರಂತೆ ಬಾಳಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ನಾವೆಲ್ಲಾ ಭಾರತಾಂಬೆಯ ಮಕ್ಕಳು. ಭಾರತ ದೇಶದಲ್ಲಿರುವ ಎಲ್ಲರೂ ಭಾರತ ಮಾತೆಗೆ ಜೈಕಾರ ಹಾಕಬೇಕು. ಅದರ ಬದಲು ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎನ್ನುವುದು ಅನಿವಾರ್ಯವಾಗುತ್ತದೆ. ಹಿಂದೂ ಮುಸ್ಲೀಂ ಇಬ್ಬರ ಬಾಂಧವ್ಯ ಬೆಸೆಯಬೇಕಾದರೆ ಭಾರತ ನಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ರಾಜ್ಯದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯೊಂದು ವಿಕಲಚೇತನ ಮಕ್ಕಳ ಬಗ್ಗೆ ಚಿಂತನೆ ನಡೆಸಿದೆ ಎಂದರೆ ಅದು ಶಾಸಕರ ಮಾರ್ಗದರ್ಶನದಲ್ಲಿ ಸಾಗರ ನಗರಸಭೆ ಎನ್ನುವುದು ಹೆಗ್ಗಳಿಕೆಯ ಸಂಗತಿ. ವಿಕಲಚೇತನ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಪೋಷಕರು ಮತ್ತು ಮಕ್ಕಳ ಹೆಸರಿನಲ್ಲಿ ರೂ. ೪೦ ಸಾವಿರ ಬಾಂಡ್ ನೀಡಲಾಗುತ್ತಿದೆ ಎಂದರು.
ಪೌರಾಯುಕ್ತ ರಾಜು ಡಿ. ಬಣಕಾರ್ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಮಧುಮಾಲತಿ, ಪ್ರೇಮ ಸಿಂಗ್, ಸುಧಾ ಉದಯ್, ಬಿ.ಎಚ್.ಲಿಂಗರಾಜ್, ಗಣೇಶ್‌ಪ್ರಸಾದ್, ಸವಿತಾ ವಾಸು, ರಾಜೇಂದ್ರ ಪೈ, ಶ್ರೀರಾಮ್, ಸತೀಶ್ ಕೆ. ಮತ್ತಿತರರಿದ್ದರು.