ಶಿವಮೊಗ್ಗ, ಏ.14:
ಕೆಲ ಒತ್ತಡ, ಕೆಲ ಮಾನಸಿಕ ಕ್ಷೋಭೆ ಹಾಗೂ ತಪ್ಪಲ್ಲದ ತಪ್ಪಿನ ಆರೋಪ ಹೊರದೇ ಅಲ್ಲಿಂದ ಹೊರಬರುವ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜೀನಾಮೆಯ ದಿಡೀರ್ ನಿರ್ಧಾರ ಕೈಗೊಂಡ ಸಚಿವ ಕೆ. ಎಸ್. ಈಶ್ವರಪ್ಪ ಅವರ ಮನೆಯ ಮುಂದೆ ಸಾಕಷ್ಟು ಪರಮಾಪ್ತ ಅಭಿಮಾನಿಗಳು ದುಃಖದಿಂದ ಅಳಲು ತೋಡಿಕೊಳ್ಳುತ್ತಿದ್ದರು. ಆದರೆ, ಅವರದೇ ನೆರಳಿನಲ್ಲಿ ಕೈ ಒರೆಸಿಕೊಳ್ಳುತ್ತಾ, ಪರಮಾಪ್ತರೆನಿಕೊಂಡವರು ಇಲ್ಲಿ ನಿಗೂಢವಾಗಿದ್ದರು ಎಂಬುದೇ ದುರಂತ..!
ಇಂದು ರಾತ್ರಿ ಸಚಿವರಾದ ಈಶ್ವರಪ್ಪನವರ ಮನೆ ಮುಂದೆ ಮುರುಗ ಎಂಬ ಅಭಿಮಾನಿಯೊಬ್ಬ ತಮ್ಮ ಗುರುಭಕ್ತಿಗಾಗಿ ತನ್ನ ಮೈ ಮೇಲೆ ಪೆಟ್ರೋಲ್ ಸುರಿದು ಕೊಂಡಿದ್ದಾನೆ.
ಇದನ್ನು ಕಂಡ ಸುತ್ತಮುತ್ತಲಿನ ಜನ ಬೆಂಕಿ ಹಚ್ಚಿಕೊಳ್ಳುವ ಮುನ್ನ ತಪ್ಪಿಸಿದ್ದಾರೆ. ಕ್ಯಾನ್ ನೀರು ಸುರಿದು ರಕ್ಷಿಸಿದ್ದಾರೆ.
ಇದು ತಮಾಷೆ ಅಥವ ಹುಡುಗಾಟದ ವಿಷಯವಲ್ಲ. ಈಶ್ವರಪ್ಪ ಅವರ ಬಗ್ಗೆ, ಅವರಿಂದ ಯಾವುದೇ ಚಿಕ್ಕ ಸಹಾಯ ಪಡೆಯದೇ ಇದ್ದರೂ ಅವರ ಮಾನವೀಯ ಮೌಲ್ಯಗಳನ್ನು ನೋಡಿ ಹಾಗೂ ಈಶ್ವರಪ್ಪರ ಬಗ್ಗೆ ಇರುವ ಒಲವಿಗಾಗಿ ಇಂತಹ ಆತಂಕಕ್ಕೆ ಮುರುಗ ಒಳಗಾಗಿದ್ದನು ಎನ್ನಲಾಗಿದೆ.
ಒಟ್ಟಾರೆ, ಶಿವಮೊಗ್ಗ ನಗರದ ಅಭಿವೃದ್ಧಿ ಕಾರ್ಯಗಳ ಪ್ರೇರಕ ಶಕ್ತಿಯಾಗಿದ್ದ ಈಶ್ವರಪ್ಪ ಅವರ ರಾಜೀನಾಮೆ ನಿರ್ಧಾರ ನಗರದ ಬಹುಭಾಗದ ಜನರನ್ನು ಆತಂಕಕ್ಕೆ ದೂಡಿದೆ.