Site icon TUNGATARANGA

ಈಶ್ವರಪ್ಪ ರಾಜೀನಾಮೆ ಸಾಧ್ಯತೆ: ಹೈ ಆದೇಶವೋ ಅಥವಾ ತಪ್ಪಿಲ್ಲವೆಂದು ಸಾಬೀತುಪಡಿಸುವ ನಿರ್ಧಾರವೋ…?

Tungataranga News, April 13, 2022 | state news

ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿ ಸಚಿವ ಈಶ್ವರಪ್ಪ ಹಾಗೂ ಆಪ್ತರಾದ ಬಸವರಾಜ ಮತ್ತು ರಮೇಶ್ ವಿರುದ್ಧ ಮೃತರ ಸಂಬಂಧಿ ಬೆಳಗಾವಿಯ ಪ್ರಶಾಂತ ಗೌಡಪ್ಪ ಪಾಟೀಲ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎ. 13ರಂದು ನಸುಕಿನ ವೇಳೆ ಕಲಂ:306 Rw 34 IPCಯಂತೆ ಪ್ರಕರಣ ದಾಖಲಾಗಿದೆ.
ಉಡುಪಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಶಾಂಭವಿ ಹೋಟೆಲ್ ನಲ್ಲಿ ಎ.11ರ ರಾತ್ರಿ 11ಗಂಟೆಯಿಂದ ಎ.12ರ ಬೆಳಗ್ಗೆ 10ಗಂಟೆಯ ಮಧ್ಯಾವಧಿಯಲ್ಲಿ ಸಂತೋಷ್ ಪಾಟೀಲ್ ಅನುಮಾನಾಸ್ಪದ ವಾಗಿ ಸಾವನ್ನಪ್ಪಿದ್ದು, ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಮೈಸೂರಿನಿಂದ ಶಿವಮೊಗ್ಗಕ್ಕೆ ವಾಪಾಸಾಗುತ್ತಿರುವ ಈಶ್ವರಪ್ಪ ಅವರು ಇಂದು ಮದ್ಯಾಹ್ನ ಒಂದು ಗಂಟೆಗೆ ತುರ್ತು ಪತ್ರಿಕಾಗೋಷ್ಟಿ ಕರೆದಿದ್ದಾರೆ. ಇಲ್ಲಿ ನಿಚ್ಚಳ ಮಾಹಿತಿ ಲಭಿಸಲಿದೆ.
ಮತ್ತೊಂದು ಮಾಹಿತಿ ಪ್ರಕಾರ ಇಂದು ಬೆಳಿಗ್ಗೆ ದೂರು ದಾಖಲಾದ ಕೂಡಲೇ ಹೈಕಮಾಂಡ್ ನ ಪ್ರಮುಖರೊಬ್ಬರು ಈಶ್ವರಪ್ಪ ಅವರ ಜೊತೆ ಮಾತನಾಡಿದ್ದಾರೆನ್ನಲಾಗಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಈ ನಡುವೆ, ಮಂಗಳೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ರಾಜದಾನಿಗೆ ವಾಪಾಸಾಗುತ್ತಿದ್ದಾರೆ.

ಹಿನ್ನೆಲೆ
‘ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಈಗ ಸಚಿವ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದರ ಬೆನ್ನಿಗೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಹೋರಾಟ ಮುಗಿಲು ಮುಟ್ಟಿದೆ ಮುಜುಗರಕ್ಕೆ ಒಳಗಾದ ಬಿಜೆಪಿ ಸರ್ಕಾರ ಶೀಘ್ರದಲ್ಲಿಯೇ ಸಚಿವ ಕೆ.ಎಸ್. ಈಶ್ವರಪ್ಪನವರಿಂದ ರಾಜಿನಾಮೆ ಪಡೆಯಬಹುದು.? ಈ ಹಾದಿಯಲ್ಲಿ ಕೆಎಸ್ಇ ಅವರ ತಲೆದಂಡ ಆಗುವುದು ಬಹುತೇಕ ಖಚಿತವೆನ್ನಲಾಗಿದೆ?
ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲಿಯೇ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈಶ್ವರಪ್ಪ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಮತ್ತು ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು ಹಾಗೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನೂ ಆಗಿದ್ದರಿಂದ ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ಈಶ್ವರಪ್ಪ ಸಚಿವ ಸ್ಥಾನದಲ್ಲಿ ಮುಂದುವರೆದರೆ ಪ್ರತಿಪಕ್ಷಗಳು ಇದನ್ನು ಚುನಾವಣಾ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ವಿವಾದವನ್ನು ತಣ್ಣಗಾಗಿಸಲು ಅವರಿಂದ ರಾಜೀನಾಮೆ ಪಡೆದು ವಿರೋಧ ಪಕ್ಷದವರಿಗೆ ಅಸ್ತ್ರವಾಗದಂತೆ ಬಿಜೆಪಿ ಈಶ್ವರಪ್ಪನವರ ತಲೆದಂಡ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯದಿದ್ದರೆ ಖುದ್ದಾಗಿ ಬೊಮ್ಮಾಯಿ ಸರ್ಕಾರಕ್ಕೆ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಲಿದೆ. ನೈತಿಕವಾಗಿ ಪ್ರತಿಪಕ್ಷಗಳ ವಿರುದ್ಧ ಮಾತನಾಡಲು ಬಿಜೆಪಿಗೆ ತಾಕತ್ತಿಲ್ಲದಂತಾಗುತ್ತದೆ. ಇದೆಲ್ಲವನ್ನು ಗಮನಿಸಿರುವ ಸರ್ಕಾರ ಬೀಸುವ ದೊಣ್ಣೆಯಿಂದ ಪಾರಾಗಲು ರಾಜೀನಾಮೆ ಪಡೆಯುವುದು ಏಕೈಕ ಮಾರ್ಗವಾಗಿದೆ.

Exit mobile version